ಬೆಂಗಳೂರು: ರಾಜಧಾನಿಯ ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಆಧುನಿಕ ಸ್ಪರ್ಶ ನೀಡಿದ್ದ ನಂತರ ಇದೀಗ ಯಶವಂತಪುರ ರೈಲ್ವೆ ನಿಲ್ದಾಣಕ್ಕೂ ವಿಮಾನ ನಿಲ್ದಾಣದಂತೆ ಆಧುನಿಕ ಸೌಕರ್ಯ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮಂಗಳೂರು: ಬಾಲ್ಕನಿಯ ಕರ್ಟನ್ ಸರಿಪಡಿಸುವ ವೇಳೆ 5ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು
ಬರೋಬ್ಬರಿ 130 ವರ್ಷಗಳಷ್ಟು ಹಳೆಯದಾದ ಯಶವಂತಪುರ ರೈಲ್ವೆ ನಿಲ್ದಾಣ ರಾಜಧಾನಿಯಲ್ಲಿನ ಎರಡನೇ ಅತೀ ದೊಡ್ಡ ಜನನಿಬಿಡ ರೈಲ್ವೆ ಟರ್ನಿನಲ್ ಆಗಿದ್ದು, ಇದನ್ನು ಅಂದಾಜು 400 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕಗೊಳಿಸಲಾಗುವುದು. ಈ ಬಗ್ಗೆ ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣವನ್ನು 314 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅದೇ ರೀತಿ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣವನ್ನು 442 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಇತ್ತೀಚೆಗಷ್ಟೇ ಟೆಂಡರ್ ಆಹ್ವಾನಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾನ 1892ರಿಂದ ಕಾರ್ಯಾಚರಿಸುತ್ತಿದೆ. ಇದೊಂದು ಹವಾನಿಯಂತ್ರಿತ ಅತ್ಯಾಧುನಿಕ ರೈಲ್ವೆ ನಿಲ್ದಾನವಾಗಲಿದ್ದು, ನಿಲ್ದಾಣಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ರೈಲ್ವೆ ಮಾರ್ಗ ಒಂದೇಯಾಗಿರಲಿದೆ. ಪ್ರಯಾಣಿಕರಿಗಾಗಿ ಅತ್ಯಾಧುನಿಕ ವಿಶ್ರಾಂತಿ ಕೋಣೆ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.