ಬೆಂಗಳೂರು: ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದ ಆರೋಪಿಯನ್ನು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಂಕದಕಟ್ಟೆ ಮುದ್ದಿನಪಾಳ್ಯದ ಹನುಮೇಶ್ ಅಲಿಯಾಸ್ ಚಿನ್ನ ಹನುಮಯ್ಯ(32) ಬಂಧಿತ. ಆರೋಪಿಯಿಂದ 22.50 ಲಕ್ಷ ರೂ. ಮೌಲ್ಯದ 30 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಕೆ.ಆರ್.ಪುರ ಸಮೀಪದ ಕೌದೇನಹಳ್ಳಿ ಮನೆಯೊಂದರ ಬಳಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾ ಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಘಟನಾ ಸ್ಥಳದ ಸುತ್ತಮುತ್ತಲ ಸಿಸಿ ಕ್ಯಾಮೆರಾ ಪರಿಶೀಲನೆ ವೇಳೆ ಸಿಕ್ಕ ಸುಳಿವು ಹಾಗೂ ಬಾತ್ಮೀದಾರರು ನೀಡಿದ ಖಚಿತ ಮಾಹಿತಿ ಮೇರೆಗೆ ಮುದ್ದಿನಪಾಳ್ಯದಲ್ಲಿ ದ್ವಿಚಕ್ರ ವಾಹನ ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿಯು ದ್ವಿಚಕ್ರ ವಾಹನ ಕಳ್ಳತನ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಕದ್ದ ಬೈಕ್ ಆಂಧ್ರಪ್ರದೇಶದಲ್ಲಿ ಮಾರಾಟ! ಆರೋಪಿ ಕೆಲವು ದ್ವಿಚಕ್ರ ವಾಹನಗಳನ್ನು ಆಂಧ್ರಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಪ್ರಯತ್ನಿಸಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈತನ ಬಂಧನದಿಂದ ಕೆ.ಆರ್.ಪುರದಲ್ಲಿ 3, ಎಚ್‌ಎಎಲ್, ಮಹದೇವಪುರ, ಪರಪ್ಪನ ಅಗ್ರಹಾರ, ಬ್ಯಾಡರಹಳ್ಳಿ, ಹೆಬ್ಬಗೋಡಿ ಠಾಣೆ ತಲಾ 1 ಸೇರಿ ಒಟ್ಟು 8 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.
ಆರೋಪಿ ಹನುಮೇಶ್ ನೀಡಿದ ಮಾಹಿತಿ ಮೇರೆಗೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕಂದಕೂರು ಗ್ರಾಮದ ಖಾಲಿ ಜಾಗದಲ್ಲಿ ನಿಲುಗಡೆ ಮಾಡಿದ್ದ 8 ದ್ವಿಚಕ್ರ ವಾಹನಗಳು, ಕೆ.ಆರ್.ಪುರದ ಖಾಲಿ ಜಾಗದಲ್ಲಿ ನಿಲುಗಡೆ ಮಾಡಿದ್ದ 10 ದ್ವಿಚಕ್ರ ವಾಹನಗಳು ಹಾಗೂ ಯಲಹಂಕದ ಬಳಿ ನಿಲುಗಡೆ ಮಾಡಿದ್ದ 11 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.