ಬೆಂಗಳೂರು: ಮಾನಸಿಕ ಖನ್ನತೆಗೊಳಗಾಗಿ ರಿಚ್ಮಂಡ್ ಜಂಕ್ಷನ್ ಮೇಲ್ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಕ್ಯಾಬ್ ಚಾಲಕನನ್ನು ಅಶೋಕನಗರ ಸಂಚಾರ ಠಾಣೆ ಪೊಲೀಸರ ಸಮಯ ಪ್ರಜ್ಞೆಯಿಂದ ರಕ್ಷಿಸಲಾಗಿದೆ.
ಬಾಗಲೂರು ನಿವಾಸಿ ವೆಂಕಟರಾಜು (37) ರಕ್ಷಣೆಗೊಳಗಾದ ಕ್ಯಾಬ್ ಚಾಲಕ.
ಬುಧವಾರ ಸಂಜೆ 6.30ರ ಸುಮಾರಿಗೆ ರಿಚ್ಮಂಡ್ ಜಂಕ್ಷನ್ ಮೇಲುಸೇತುವೆಯಲ್ಲಿ ಘಟನೆ ನಡೆದಿದೆ. ವೆಂಕಟ ರಾಜುಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಬಾಗಲೂರಿನಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ. ಈ ಮಧ್ಯೆ ಕೆಲ ತಿಂಗಳ ಹಿಂದೆ ವೆಂಕಟರಾಜು ಅಜ್ಜಿ ಮೃತಪಟ್ಟಿದ್ದರು. ಅಂದಿನಿಂದ ಮಾನಸಿಕ ಖನ್ನತೆಗೊಳಗಾದ ವೆಂಕಟರಾಜು, “ನನ್ನ ಅಜ್ಜಿ ಕರೆಯುತ್ತಿದ್ದಾಳೆ. ನಾನು ಹೋಗಬೇಕು’ ಎಂದೆಲ್ಲ ಹೇಳಿಕೊಂಡು ಎಲ್ಲೆಂದರಲ್ಲಿ ಹೋಗುತ್ತಿದ್ದರು.
ಹೀಗಾಗಿ ಅವರನ್ನು ನಿಮ್ಹಾನ್ಸ್ ಹಾಗೂ ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಕೆಲ ದಿನಗಳ ಹಿಂದೆ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿ ಸಿದ್ದು, ಚಿಕಿತ್ಸೆ ಪಡೆದು ಬುಧವಾರ ಸಂಜೆ ಪತ್ನಿ ಮತ್ತು ಭಾಮೈದ ಕಾರಿನಲ್ಲಿ ಬಾಗಲೂರಿನ ಮನೆಗೆ ಕರೆದೊಯ್ಯುತ್ತಿದ್ದರು.
ಮಾರ್ಗ ಮಧ್ಯೆ ರಿಚ್ಮಂಡ್ ಜಂಕ್ಷನ್‌ನ ಮೇಲು ಸೇತುವೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಆಗ ಕಾರು ನಿಂತುಕೊಂಡಿದೆ. ಈ ವೇಳೆ ಏಕಾಏಕಿ ಕಾರಿನಿಂದ ಇಳಿದ ವೆಂಕಟರಾಜು, ಸೇತುವೆಯಿಂದ ಜಿಗಿಯಲು ಯತ್ನಿಸಿದ್ದಾರೆ. ಮೊದಲಿಗೆ ಮೊಬೈಲ್ ಅನ್ನು ಮೇಲು ಸೇತುವೆ ಯಿಂದ ಎಸೆದಿದ್ದಾರೆ. ಆಗ ಸ್ಥಳೀಯರು ಮೊಬೈಲ್ ಕಳ್ಳನಿರಬೇಕೆಂದು ಕೂಗಿಕೊಂಡಿದ್ದಾರೆ.
ಕೂಡಲೇ ಅವರ ಪತ್ನಿ, ಪತಿಯನ್ನು ರಕ್ಷಣೆ ಮಾಡುವಂತೆ ಕೂಗಿಕೊಂಡಿದ್ದಾರೆ. ಅದೇ ವೇಳೆ ಕೆಳ ಭಾಗದಲ್ಲಿ ಕರ್ತವ್ಯ ನಿರ್ವಹಿಸು ತ್ತಿದ್ದ ಅಶೋಕನಗರ ಠಾಣೆಯ ಪಿಎಸ್‌ಐ ಬಿ.ಎಂ. ಹರೀಶ್ ಕುಮಾರ್ ಮತ್ತು ಹೆಡ್‌ಕಾನ್‌ಸ್ಟೇಬಲ್ ಡಿ.ಜಿ.ಲೋಕೇಶ್ ಹೊಯ್ಸಳ ವಾಹನದಲ್ಲಿ ಏಕಮುಖ ರಸ್ತೆಯಲ್ಲಿ ಸೈರನ್ ಹಾಕಿಕೊಂಡು ವೇಗವಾಗಿ ಸ್ಥಳಕ್ಕೆ ತೆರಳಿದ್ದಾರೆ.
ಬಳಿಕ ಸ್ಥಳೀಯರ ಸಹಾಯದಿಂದ ವೆಂಕಟರಾಜುನನ್ನು ರಕ್ಷಣೆ ಮಾಡಿ, ಅಶೋಕನಗರ ಕಾನೂನು ಮತ್ತು ಸುವ್ಯವಸ್ಥೆ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ, ಬಳಿಕ ಅವರ ಕುಟುಂಬ ಸದಸ್ಯರ ಜತೆ ಸುರಕ್ಷಿತವಾಗಿ ಕಳುಹಿಸಿದ್ದಾರೆ. ಪಿಎಸ್‌ಐ ಹರೀಶ್ ಕುಮಾರ್ ಮತ್ತು ಹೆಡ್‌ಕಾನ್‌ಸ್ಟೇಬಲ್ ಲೋಕೇಶ್ ಅವರ ಕರ್ತವ್ಯಪ್ರಜ್ಞೆಯನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.