Advertisement

ತಿಗರಪಾಳ್ಯ ಘಟನೆ: 5 ದಿನ ಶವಗಳ ಮುಂದೆ ಕಣ್ಣೀರಿಟ್ಟು ಬದುಕಿದ ಎರಡೂವರೆ ವರ್ಷದ ಪ್ರೇಕ್ಷಾ!

10:48 AM Sep 18, 2021 | Team Udayavani |

ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಒಂದೇ ಕುಟುಂಬ ನಾಲ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಒಂಭತ್ತು ತಿಂಗಳ ಹಸುಗೂಸು ಆಹಾರವಿಲ್ಲದೆ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಶುಕ್ರವಾರ ಸಂಜೆ ಬ್ಯಾಡರಹಳ್ಳಿಯ ತಿಗರಪಾಳ್ಯದಲ್ಲಿ ನಡೆದಿದೆ.

Advertisement

ಹಲ್ಲೆಗೆರೆ ಶಂಕರ್‌ ಎಂಬುವರ ಪತ್ನಿ ಭಾರತಿ (51), ಅವರ ಮೊದಲ ಪುತ್ರಿ ಸಿಂಚನಾ (34), ಎರಡನೇ ಪುತ್ರಿ ಸಿಂಧುರಾಣಿ (31) ಮತ್ತು ಪುತ್ರ ಮಧುಸಾಗರ್‌ (25) ಮತ್ತು ಸಿಂಧುರಾಣಿಯ 9 ತಿಂಗಳ ಗಂಡು ಮಗು ಆಹಾರವಿಲ್ಲದೆ ಮೃತಪಟ್ಟಿದೆ. ಐದು ಮೃತದೇಹಗಳ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಈ ಮಧ್ಯೆ ಎರಡೂವರೆ ವರ್ಷದ ಪ್ರೇಕ್ಷಾ ಎಂಬ ಹೆಣ್ಣು ಮಗು ಪವಾಡದಂತೆ ಬದುಕುಳಿದಿದೆ.

ತಾಯಿ, ಚಿಕ್ಕಮ್ಮ, ಅಜ್ಜಿ ಮತ್ತು ಮಾವ ನೇಣಿಗೆ ಶರಣಾದ ಬಳಿಕ ದಿಕ್ಕು ತೋಚದೆ ಎರಡೂವರೆ ವರ್ಷದ ಸಿಂಚನಾ ಪುತ್ರಿ ಪ್ರೇಕ್ಷಾ, ಶವಗಳ ಮುಂದೆಯೇ ಕಣ್ಣೀರು ಸುರಿಸಿ ಅಸ್ವಸ್ಥಗೊಂಡು ಹಾಸಿಗೆ ಪಕ್ಕದಲ್ಲಿ ಬಿದ್ದಿದ್ದಳು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ: ತಡವಾಗಿ ಬೆಳಕಿಗೆ ಬಂದ ಘಟನೆ

ದೊಡ್ಡ ಮನೆಯಾಗಿದ್ದರಿಂದ ಆಕೆ ಅಳು ಹೊರಗೆ ಯಾರಿಗೂ ಕೇಳಿಸಿಲ್ಲ. ಪೊಲೀಸರು ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಪ್ರೇಕ್ಷಾ ಬದುಕಿರುವುದನ್ನು ಖಚಿತ ಪಡಿಸಿಕೊಂಡು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಐದು ದಿನಗಳಿಂದ ಆಹಾರ ಸೇವಿಸದರಿಂದ ಆಕೆ ಅಸ್ವಸ್ಥಗೊಂಡಿದ್ದಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಆಹಾರವಿಲ್ಲದೆ 9 ತಿಂಗಳ ಮಗು ಸಾವು: ಸಿಂಧುರಾಣಿಯ 9 ತಿಂಗಳ ಮಗು ಹಾಲು, ಆಹಾರವಿಲ್ಲದೆ ಮೃತಪಟ್ಟಿರುವುದು ಪತ್ತೆಯಾಗಿದೆ. ಸೆ.12ರಂದು ಮಗುವಿಗೆ ಹಾಲು ಕುಡಿಸಿ ಬೆಡ್‌ ಮೇಲೆ ಮಲಗಿಸಿದ್ದಾರೆ. ಅನಂತರ ಮಗುವಿಗೆ ಯಾವುದೇ ಆಹಾರ ಸೇವಿಸಿಲ್ಲ. ಹೀಗಾಗಿ ಮಗು ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕೌಟುಂಬಿಕ ವಿಚಾರವೇ ಘಟನೆಗೆ ಕಾರಣ: ಶಂಕರ್‌ “ಶಾಸಕ’ ಎಂಬ ಪತ್ರಿಕೆಯ ಸಂಪಾದಕರಾಗಿದ್ದು, ಬ್ಯಾಡರಹಳ್ಳಿಯ ತಿಗಳರಪಾಳ್ಯದ ಚೇತನ್‌ ವೃತ್ತದ 4ನೇ ಕ್ರಾಸ್‌ನಲ್ಲಿರುವ ಮನೆಯಲ್ಲಿ ಕುಟುಂಬ ಸದಸ್ಯರ ಜತೆ ವಾಸವಾಗಿದ್ದರು. ಕಳೆದ ಹತ್ತು ವರ್ಷಗಳಿಂದ ಶಂಕರ್‌ ಮತ್ತು ಪತ್ನಿ, ಮಕ್ಕಳ ನಡುವೆ ಕೌಟುಂಬಿಕ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಶಂಕರ್‌ ಮೊದಲ ಪುತ್ರಿ ಸಿಂಚನಾಗೆ ಮದುವೆಯಾಗಿದ್ದು, ಒಂದೂವರೆ ವರ್ಷದಿಂದ ಪತಿ ಯೊಂದಿಗೆ ಗಲಾಟೆ ಮಾಡಿಕೊಂಡು ತವರಿನಲ್ಲೇ ಇದ್ದಾರೆ. ಇನ್ನು ಎರಡನೇ ಪುತ್ರಿ ಸಿಂಧುರಾಣಿ ಕೂಡ, ತನ್ನ ಪತಿಯ ಜತೆಗೆ ಜಗಳವಾಡಿಕೊಂಡು ತವರಿಗೆ ವಾಪಸ್‌ ಬಂದಿದ್ದರು. ಅಲ್ಲದೆ, ಹತ್ತು ದಿನಗಳ ಹಿಂದೆ 9 ತಿಂಗಳ ಗಂಡು ಮಗುವಿನ ನಾಮಕಾರಣ ವಿಚಾರದಲ್ಲಿ ಸಿಂಧುರಾಣಿ ಪತಿಯ ಮನೆ ಮತ್ತು ಶಂಕರ್‌ ಕುಟುಂಬ ನಡುವೆ ಜಗಳ ನಡೆದಿತ್ತು. ಮಗುವಿಗೆ ಕಿವಿ ಚುಚ್ಚಿಸುವಂತೆ ಶಂಕರ್‌ ಕುಟುಂಬ ಹೇಳಿತ್ತು. ಆದರೆ, ಸಿಂಧುರಾಣಿ ಪತಿ ಕುಟುಂಬ ಅದಕ್ಕೆ ನಿರಾಕರಿಸಿತ್ತು. ಅದೇ ವಿಚಾರಕ್ಕೆ ಆಕೆ ಗಲಾಟೆ ಮಾಡಿಕೊಂಡು ತವರು ಮನೆಗೆ ಬಂದಿದ್ದು, ಆತ್ಮಹತ್ಯೆಗೂ ಯತ್ನಿಸಿದ್ದರು.

ಇನ್ನು ಶಂಕರ್‌ ಮತ್ತು ಪುತ್ರ ಮಧುಸೂದನ್‌ ನಡುವೆ ಹಣಕಾಸಿನ ವಿಚಾರಕ್ಕೆ ಗಲಾಟೆಯಾಗಿತ್ತು. ಎಂಎಸ್‌ಐಎಲ್‌ ನಲ್ಲಿ ಕಟ್ಟಿದ್ದ ಚೀಟಿ ಹಣ ಹತ್ತು ಲಕ್ಷ ರೂ. ಬಗ್ಗೆ ಪುತ್ರ ಮತ್ತು ಪತ್ನಿ ಶಂಕರ್‌ಗೆ ಒತ್ತಾಯಿಸಿದ್ದರು. ಆದರೆ, ಶಂಕರ್‌ ಕೊಡಲು ನಿರಾಕರಿಸಿದ್ದರು ಎಂದು ಹೇಳಲಾಗಿದೆ. ಈ ಎಲ್ಲ ವಿಚಾರಗಳಿಗೆ ಭಾನುವಾರ ಶಂಕರ್‌ ಮತ್ತು ಪತ್ನಿ, ಮಕ್ಕಳ ನಡುವೆ ಗಲಾಟೆ ಆಗಿತ್ತು. ಅದರಿಂದ ಬೇಸರಗೊಂಡು ಶಂಕರ್‌ ಕೆಲಸದ ಹೆಸರಿನಲ್ಲಿ ಮೈಸೂರಿಗೆ ಹೋಗಿದ್ದರು ಎಂದು ಹೇಳಲಾಗಿದೆ. ಅವರು ವಾಪಸ್‌ ಬಂದಾಗ ಘಟನೆ ಬೆಳಕಿಗೆ ಬಂದಿದೆ

Advertisement

Udayavani is now on Telegram. Click here to join our channel and stay updated with the latest news.

Next