Advertisement
ಹೆಸರುಘಟ್ಟ ನಿವಾಸಿ ಮಂಜೇಶ್ ಅಲಿಯಾಸ್ ಹೊಟ್ಟೆ ಮಂಜ ಬಂಧಿತ. ಕೊರಟಗೆರೆ ಠಾಣೆಯ ಕಾನ್‌ಸ್ಟೆಬಲ್ ದೊಡ್ಡಲಿಂಗಯ್ಯ ಬಂಧಿಸಿದವರು. ಬಂಧಿತನಿಂದ 10 ಸಾವಿರ ರೂ. ನಗದು ಹಾಗೂ 6.75 ಲಕ್ಷ ಮೌಲ್ಯದ 135 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಮಂಜೇಶ್ ವಿರುದ್ಧ ಕೊರಟಗೆರೆ ಠಾಣೆ ಸೇರಿ ದಕ್ಷಿಣ ಕರ್ನಾಟಕದ ಹತ್ತಾರು ಪೊಲೀಸ್ ಠಾಣೆಗಳಲ್ಲಿ 40ಕ್ಕೂ ಹೆಚ್ಚು ಕಳ್ಳತನ ಹಾಗೂ ವಂಚನೆ ಪ್ರಕರಣಗಳು ದಾಖಲಾಗಿವೆ.
Related Articles
ಆರೋಪಿಗಾಗಿ 1 ತಿಂಗಳ ಕಾರ್ಯಾಚರಣೆ ನಡೆಯುತ್ತಿತ್ತು. ಆದರೆ ಕಳೆದ 1 ವಾರದಲ್ಲಿ ಆತನ ಚಲನವಲನಗಳ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಆ. 6ರಂದು ಬೆಳಗ್ಗೆ 10 ಗಂಟೆಗೆ ಸದಾಶಿವನಗರದ ಟ್ರಾಫಿಕ್ ಸಿಗ್ನಲ್ ಬಳಿ ಮಫ್ತಿಯಲ್ಲಿ ದೊಡ್ಡಲಿಂಗಯ್ಯ ಕಾಯುತ್ತಿದ್ದರು. ಮಂಜ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಂತೆ ಆತನನ್ನು ವಾಹನ ಸಮೇತ ತಡೆಯಲು ಮುಂದಾದರು.
Advertisement
ಆರೋಪಿ ಸ್ಕೂಟರ್ ಸಮೇತ ತಪ್ಪಿಸಿಕೊಳ್ಳಲು ಮುಂದಾದನು. ಆದರೂ ಬಿಡದ ಕಾನ್‌ಸ್ಟೆಬಲ್ ಸ್ಕೂಟರನ್ನು ಹಿಡಿದುಕೊಂಡಾಗ ಅವರನ್ನೇ ಆರೋಪಿ ಸುಮಾರು 50 ಮೀಟರ್ ದೂರ ಎಳೆದೊಯ್ದನು. ಅಷ್ಟರಲ್ಲಿ ಕಾನ್‌ಸ್ಟೆಬಲ್ ಆರೋಪಿಯ ಕಾಲನ್ನು ಬಿಗಿಯಾಗಿ ಹಿಡಿದುಕೊಂಡರು. ಅನಂತರ ಅಲ್ಲೇ ಇದ್ದ ಟ್ರಾಫಿಕ್ ಮಹಿಳಾ ಎಎಸ್‌ಐ, ಹೋಮ್‌ಗಾರ್ಡ್ ಹಾಗೂ ಸ್ಥಳೀಯರು ದೊಡ್ಡಲಿಂಗಯ್ಯಗೆ ಸಹಾಯ ಮಾಡಿದರು. ಸಾರ್ವಜನಿಕರು ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾರ್ವಜನಿಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ದೊಡ್ಡಲಿಂಗಯ್ಯ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
1 ತಿಂಗಳಿನಿಂದ ಕಾಯುತ್ತಿದ್ದೆಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾನ್‌ಸ್ಟೆಬಲ್ ದೊಡ್ಡಲಿಂಗಯ್ಯ, ಈ ಅವಕಾಶವನ್ನು ನಾನು ಬಿಟ್ಟಿದ್ದರೆ ಮತ್ತೆ ಯಾವುತ್ತು ಆತನನ್ನು ಬಂಧಿಸಲು ಸಾಧ್ಯವಾಗುತ್ತಿರಲಿಲ್ಲ. 1 ತಿಂಗಳಿಂದ ಮನೆ ಬಿಟ್ಟು ಬಂದು ಆತನಿಗಾಗಿ ಬೆಂಗಳೂರಿನಲ್ಲಿ ಶೋಧ ನಡೆಸುತ್ತಿದ್ದೇವೆ. ಆತ ಮಾಸ್ಕ್ ಹಾಗೂ ಹೆಲ್ಮೆಟ್ ಧರಿಸಿ ಓಡಾಡುತ್ತಿದ್ದ. ಪತ್ತೆ ಕಾರ್ಯ ಕಷ್ಟವಾಗಿತ್ತು. ಆದರೂ ಬಂಧಿಸಿದ್ದೇವೆ ಎಂದರು.