ಬೆಂಗಳೂರು: ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳ ಪುತ್ಥಳಿ ವಿರೂಪಗೊಳಿಸಿದ ಫುಡ್ ಡೆಲಿವರಿ ಬಾಯ್‌ನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಬ್ಯಾಡರಹಳ್ಳಿ ಸಮೀಪದ ಭರತನಗರ ನಿವಾಸಿ ಶಿವಕೃಷ್ಣ (34) ಬಂಧಿತ. ಆರೋಪಿ ನ.30ರಂದು ತಡರಾತ್ರಿ ಗಿರಿನಗರದ ವೀರಭದ್ರನಗರದ ಬಸ್ ನಿಲ್ದಾಣದ ಬಳಿ ಪ್ರತಿಷ್ಠಾಪಿಸಿದ್ದ ಶಿವಕುಮಾರ ಶ್ರೀಗಳ ಪುತ್ಥಳಿಯನ್ನು ವಿರೂಪಗೊಳಿಸಿದ್ದ.
5 ವರ್ಷಗಳ ಹಿಂದೆ ಜಯಕರ್ನಾಟಕ ಜನಪರ ವೇದಿಕೆ ಸಂಘಟನೆಯು ವೀರಭದ್ರನಗರದ ಬಸ್ ನಿಲ್ದಾಣ ಸಮೀಪದಲ್ಲಿ ಶಿವಕುಮಾರ ಸ್ವಾಮಿಗಳ ಪುತ್ಥಳಿ ನಿರ್ಮಿಸಿತ್ತು. ಸಂಘಟನೆಯೇ ಪುತ್ಥಳಿ ನಿರ್ವಹಿಸುತ್ತಿದೆ. ಈ ನಡುವೆ, ನ.30 ರಂದು ತಡರಾತ್ರಿ ದ್ವಿಚಕ್ರವಾಹನದಲ್ಲಿ ಬಂದ ಆರೋಪಿ ಪುತ್ಥಳಿಯನ್ನು ವಿರೂಪಗೊಳಿಸಿದ್ದಾನೆ. ಈ ಸಂಬಂಧ ಸಂಘಟನೆ ಅಧ್ಯಕ್ಷ ಪರಮೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಕ್ರೈಸ್ತ ಧರ್ಮದ ಪ್ರಭಾವದಿಂದ ಕೃತ್ಯ?: ಆರೋಪಿ ಅವಿವಾಹಿತನಾಗಿದ್ದು, ಅನಾರೋಗ್ಯದಿಂದ ಮಾನಸಿಕ ಖನ್ನತೆಗೊಳಲಾಗಿದ್ದ ಶಿವಕೃಷ್ಣ, 3 ವರ್ಷ ಗಳಿಂದ ಕ್ರೈಸ್ತ ಧರ್ಮದ ಪ್ರಭಾವಕ್ಕೊಳಗಾಗಿ ಅಂದಿ ನಿಂದ ಕ್ರಿಶ್ಚಿಯನ್ ಧರ್ಮ ಪಾಲನೆ ಮಾಡುತ್ತಿದ್ದ. ಪರಿಣಾಮ ಹಿಂದೂ ಧರ್ಮದ ಸಂತರು, ಸನ್ಯಾಸಿಗಳ ವಿರುದ್ಧ ಹಗೆತನ ಸಾಧಿಸುತ್ತಿದ್ದ. ಮತ್ತೂಂದೆಡೆ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ, ಕೆಲ ದಿನಗಳ ಹಿಂದೆ ಫುಡ್ ಡೆಲಿವರಿಗೆ ಗಿರಿನಗರದ ವೀರಭದ್ರನಗರಕ್ಕೆ ಹೋಗಿ ದ್ದಾಗ ಶ್ರೀಗಳ ಪುತ್ಥಳಿ ಗಮನಿಸಿದ್ದ. ನಂತರ ನ.30ರಂದು ತಡರಾತ್ರಿ ಅದೇ ಜಾಗಕ್ಕೆ ಬಂದು ಶ್ರೀಗಳ ಪುತ್ಥಳಿ ವಿರೂಪಗೊಳಿಸಿ ಪರಾರಿಯಾಗಿದ್ದ. ವಿಚಾರಣೆ ಯಲ್ಲೂ ಹಿಂದೂ ಧರ್ಮದ ವಿರುದ್ಧ ಹೇಳಿಕೆ ನೀಡುತ್ತಿದ್ದಾನೆ. ಹೀಗಾಗಿ ಕ್ರೈಸ್ತ ಧರ್ಮದ ಪ್ರಭಾವಕ್ಕೊಳಗಾಗಿ ಕೃತ್ಯವೆಸಗಿದ್ದಾನೆ ಎಂದು ಹೇಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೃತ್ಯವೆಸಗಿದ ಬಳಿಕ ತಮ್ಮ ಮನೆ ಸಮೀಪದಲ್ಲಿ ಹಿಂದೂ ಧಾರ್ಮಿಕ ಕಾರ್ಯಕ್ರಮ ಇರುವ ಬಗ್ಗೆ ಅಳವಡಿಸಿದ್ದ ಬ್ಯಾನರ್‌ಗೂ ಕಲ್ಲು ಎಸೆದು ಹರಿದು ಹಾಕಿದ್ದ. ಕ್ರೈಸ್ತ ಧರ್ಮದ ಪ್ರಚಾರ ಮಾಡುತ್ತಿದ್ದ ಆರೋಪಿ ಭಿತ್ತಿಪತ್ರ ಹಂಚುತ್ತಿದ್ದ. ಭಿತ್ತಿಪತ್ರದಲ್ಲಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ನೇರವಾಗಿ ಬೈಬಲ್ ಸಿಗುವಂತೆ ಲಿಂಕ್ ಕೊಟ್ಟಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.