Advertisement

Bengaluru: ತಂಗಿ ಮನೆಯಲ್ಲಿ 5.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ ಅಕ್ಕ!

12:04 PM Aug 31, 2024 | Team Udayavani |

ಬೆಂಗಳೂರು: ತಂಗಿ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಅಕ್ಕನನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಶಿಕಲಾ (30) ಬಂಧಿತ ಆರೋಪಿ.

Advertisement

ಈಕೆಯಿಂದ 5.50 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ.

ಆಡುಗೋಡಿ ವಿಎಸ್‌ ಆರ್‌ ಬಡಾವಣೆಯಲ್ಲಿ ವಾಸವಾಗಿರುವ ಚಂದ್ರಿಕಾ ಎಂಬುವವರು ಪಿ.ಜಿ. ಯೊಂದರಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡುತ್ತಿದ್ದರು. ಪತಿ ಶರವಣ ಟಾಟಾ ಏಸ್‌ ವಾಹನ ಚಾಲಕರಾಗಿದ್ದಾರೆ. ಕೆಲ ದಿನಗಳ ಹಿಂದೆ ಪತಿಗೆ ಅನಾರೋಗ್ಯ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಎಲೆಕ್ಟ್ರಾನಿಕ್‌ ಸಿಟಿಯ ದೊಡ್ಡ ತೂಗೂರಿನಲ್ಲಿರುವ ಅಕ್ಕ ಶಶಿಕಲಾ ಮನೆಗೆ ವಿಶ್ರಾಂತಿ ಪಡೆಯಲು ತಂಗಿ ಚಂದ್ರಿಕಾ ಆ.15ರಂದು ಹೋಗಿದ್ದರು. ಈ ಮಧ್ಯೆ ಔಷಧ ತರುವಂತೆ ಅಕ್ಕ ಶಶಿಕಲಾಗೆ ತಂಗಿ ಚಂದ್ರಿಕಾ ಸೂಚಿಸಿ ಸ್ಕೂಟರ್‌ನ ಕೀ ನೀಡಿದ್ದಳು. ಕೀ ಬಂಚ್‌ನಲ್ಲಿ ಮನೆಯ ಕೀ ಇರುವುದನ್ನು ಶಶಿಕಲಾ ಗಮನಿಸಿದ್ದಳು. ದ್ವಿಚಕ್ರವಾಹನವನ್ನು ಅಂಗಡಿಗೆ ಹೋಗುವ ಬದಲು ತಂಗಿ ಚಂದ್ರಿಕಾಳ ಆಡುಗೋಡಿಯಲ್ಲಿರುವ ಮನೆಯತ್ತ ತಿರುಗಿಸಿದ್ದಳು.

ಬೀರು ಒಡೆದು: ಮಾರ್ಗಮಧ್ಯೆ ಅನುಮಾನ ಬಾರದಂತೆ ಶಶಿಕಲಾ ದೊಡ್ಡಮ್ಮನನ್ನೂ ಸಹ ಸ್ಕೂಟರ್‌ ನಲ್ಲಿ ಕೂರಿಸಿಕೊಂಡು ತೆರಳಿದ್ದಳು. ತಂಗಿ ಮನೆಗೆ ಸುಮಾರು 100 ಮೀಟರ್‌ ದೂರವಿರುವಾಗ ದೊಡ್ಡಮ್ಮನನ್ನ ಇಳಿಸಿದ್ದಳು. ಬಳಿಕ ತಂಗಿಯ ಮನೆಯ ಬೀಗ ತೆಗೆದು ಒಳ ನುಗ್ಗಿ ಬೀರುವಿನ ಕೀ ಹುಡುಕಾಡಿದ್ದಳು. ಅದು ಸಿಗದೇ ಇದ್ದಾಗ ಬೀರು ಒಡೆದು 74 ಗ್ರಾಂ ಚಿನ್ನ ಹಾಗೂ 354 ಗ್ರಾಂ ಬೆಳ್ಳಿ ಆಭರಣ ಕದ್ದಿದ್ದಾಳೆ.

ಇತ್ತ ಶಶಿಕಲಾ ಮನೆಯಿಂದ ಆ.20ರಂದು ತನ್ನ ಮನೆಗೆ ಬಂದ ತಂಗಿ ಚಂದ್ರಿಕಾ ಬೀರು ಪರಿಶೀಲಿಸಿದಾಗ ಕಳ್ಳತನವಾಗಿರುವುದು ಕಂಡು ಬಂದಿತ್ತು. ಪೊಲೀಸರು, ಚಂದ್ರಿಕಾ ಮನೆಯ ಸುತ್ತ-ಮುತ್ತ ಅಳವಡಿಸಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಅಕ್ಕ ಬಂದು ಹೋಗಿರುವ ಸುಳಿವು ಸಿಕ್ಕಿತ್ತು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ಶಶಿಕಲಾ ಒಪ್ಪಿಕೊಂಡಿ ದ್ದಾಳೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.