Advertisement

Bengaluru: ರೋಡ್‌ ರೇಜ್‌: ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆದು ಸವಾರನ ಹತ್ಯೆ

02:39 PM Aug 23, 2024 | Team Udayavani |

ಬೆಂಗಳೂರು: ನಗರದಲ್ಲಿ ರೋಡ್‌ ರೇಜ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಪ್ತಗಿರಿ ಲೇಔಟ್‌ನ ಜಿಕೆವಿಕೆ ಡಬಲ್‌ ರಸ್ತೆಯಲ್ಲಿ ನಡೆದ ಸಣ್ಣ ಅಪಘಾತಕ್ಕೆ ಕಾರು ಚಾಲಕ ಸಿನಿಮೀಯವಾಗಿ ಬೆನ್ನಟ್ಟಿ ವಾಹನ ಗುದ್ದಿಸಿ ಫ‌ುಡ್‌ ಡೆಲಿ ವರಿ ಬಾಯ್‌ನನ್ನು ಹತ್ಯೆಗೈದಿ ರುವ ಘಟನೆ ಬುಧವಾರ ರಾತ್ರಿ ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಚಾಮುಂಡೇಶ್ವರಿ ಲೇಔಟ್‌ ನಿವಾಸಿ ಮಹೇಶ್‌ (21) ಕೊಲೆಯಾದ ಪುಡ್‌ ಡೆಲಿವರಿ ಬಾಯ್‌.

ಈ ಸಂಬಂಧ ಕೊಡಿಗೇಹಳ್ಳಿಯ ನಿವಾಸಿಗಳಾದ ಬೆಳ್ಳಂದೂರು ಬ್ಯಾಂಕ್‌ವೊಂದರ ವ್ಯವಸ್ಥಾಪಕ ಅರವಿಂದ ಹಾಗೂ ಸಿವಿಲ್‌ ಎಂಜಿನಿಯರ್‌ ಚನ್ನಕೇಶ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿ ಕ್ಯಾಮೆರಾದಿಂದ ಕೃತ್ಯ ಬಯಲಿಗೆ ಬಂದಿದೆ. ಕೋಲಾರ ಜಿಲ್ಲೆ ಕೆಜಿಎಫ್ ಮೂಲದ ಮಹೇಶ್‌, ಪೋಷಕರೊಂದಿಗೆ ಬಹಳ ವರ್ಷಗಳಿಂದ ಚಾಮುಂಡೇಶ್ವರಿ ಲೇಔಟ್‌ನಲ್ಲಿ ವಾಸವಾಗಿದ್ದರು. ಈತನ ಪೋಷಕರು ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಬಿ.ಕಾಂ ಓದುತ್ತಿದ್ದ ಈತ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ.

ರಾತ್ರಿ ಆತನ ಸ್ನೇಹಿತರಾದ ನಿಖೀಲ್‌ ಮತ್ತು ಬಾಲಾಜಿ ಜೊತೆಗೆ ಕಾಫಿ ಕುಡಿಯಲು ಬೈಕ್‌ ನಲ್ಲಿ ಹೋಗಿದ್ದಾಗ ದುರ್ಘ‌ಟನೆ ನಡೆದಿದೆ ಎಂದು ಪೊಲೀಸರು ಹೇಳಿದರು. ಬುಧವಾರ ರಾತ್ರಿ 9.30ರ ಸುಮಾರಿಗೆ ಮಹೇಶ್‌ ಹಾಗೂ ಸ್ನೇಹಿತರು ಒಂದೇ ಬೈಕ್‌ನಲ್ಲಿ ಮನೆಗೆ ಜಿಕೆವಿಕೆ ಡಬಲ್‌ ರಸ್ತೆಯಲ್ಲಿ ಹೋಗುತ್ತಿದ್ದರು. ಆಗ ಹಿಂದಿನಿಂದ ಬಂದ ಕಾರು ಚಾಲಕ ಅರವಿಂದ್‌ ದಾರಿ ಬಿಡುವಂತೆ ಹಾರ್ನ್ ಮಾಡಿದ್ದಾನೆ. ಆದರೆ, ಮಹೇಶ್‌ ಕಾರಿಗೆ ಜಾಗ ಬಿಡದೆ ಬೈಕ್‌ ಚಲಾಯಿಸಿದ್ದಾನೆ. ಈ ವೇಳೆ ಅರವಿಂದ್‌ರ ಕಾರಿಗೆ ಬೈಕ್‌ ತಗುಲಿದೆ. ಆಗ ಅರವಿಂದ್‌, ಬೈಕ್‌ ನಿಲ್ಲಿಸುವಂತೆ ಮಹೇಶ್‌ಗೆ ಸೂಚಿಸಿದ್ದಾನೆ. ಆದರೆ, ಆತನ ಮಾತಿಗೆ ಕಿವಿಗೊಡದ ಮಹೇಶ್‌, ಮತ್ತಷ್ಟು ವೇಗವಾಗಿ ಬೈಕ್‌ವಾಗಿ ಚಲಾಯಿಸಿಕೊಂಡು ಮುಂದೆ ಹೋಗಿದ್ದಾನೆ ಎಂದು ಪೊಲೀಸರು ಹೇಳಿದರು.

ಸಿನಿಮೀಯವಾಗಿ ಚೇಸಿಂಗ್‌ ಮಾಡಿ ಹತ್ಯೆ: ಅದರಿಂದ ಕೋಪಗೊಂಡ ಅರವಿಂದ್‌, ಮಹೇಶ್‌ನನ್ನು ಸಿನಿಮೀಯವಾಗಿ ಹಿಂಬಾಲಿಸಿಕೊಂಡು ಹೋಗಿದ್ದು, ಆಗ ಮಹೇಶ್‌ನ ಹಿಂಬದಿಯಲ್ಲಿ ಕುಳಿತಿದ್ದ ನಿಖೀಲ್‌ ಮತ್ತು ಬಾಲಾಜಿ, ರಸ್ತೆ ತಿರುವಿನಲ್ಲಿ ಬೈಕ್‌ನಿಂದ ಜಿಗಿದು ಓಡಿ ಹೋಗಿದ್ದಾರೆ. ಆ ನಂತರವೂ ಅರವಿಂದ್‌, ಮಹೇಶ್‌ನನ್ನು ಬೆನ್ನಟ್ಟಿದ್ದಾರೆ. ಅದರಿಂದ ಗಾಬರಿಯಾದ ಮಹೇಶ್‌, ಸಪ್ತಗಿರಿ ಲೇಔಟ್‌ ಕಡೆಗೆ ಬೈಕ್‌ ನುಗ್ಗಿಸಿದ್ದಾನೆ.

Advertisement

ಈ ಹಂತದಲ್ಲಿ ಅರವಿಂದ್‌, ಆತನ ಬೈಕ್‌ಗೆ ಹಿಂದಿನಿಂದ ಕಾರು ಗುದ್ದಿಸಿದ್ದಾರೆ. ಪರಿಣಾಮ ಮಹೇಶ್‌ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಾಗ ಆತನ ತಲೆ ರಸ್ತೆ ಬದಿಯ ಮನೆಯೊಂದರ ಕಾಂಪೌಂಡ್‌ಗೆ ತಗುಲಿ, ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿದೆ. ಬಳಿಕ ಆರೋಪಿಗಳು ಕಾರು ನಿಲ್ಲಿಸಿ ಗಾಯಾಳು ಮಹೇಶ್‌ನನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಮಾರ್ಗ ಮಧ್ಯೆಯೇ ಮಹೇಶ್‌ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

ರಸ್ತೆ ಅಪಘಾತ ಎಂದು ಕಥೆ ಕಟ್ಟಿದ್ದ ಆರೋಪಿಗಳು

ಆರಂಭದಲ್ಲಿ ರಸ್ತೆ ಅಪಘಾತ ಎಂದೇ ಆರೋಪಿಗಳು ಕಥೆ ಕಟ್ಟಿದ್ದರು. ಹೀಗಾಗಿ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದರು. ಆದರೆ, ಆರೋಪಿಗಳ ವರ್ತನೆಯಿಂದ ಅನುಮಾನಗೊಂಡ ಪೊಲೀಸರು, ಘಟನಾ ಸ್ಥಳ ಸುತ್ತ-ಮುತ್ತ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಉದ್ದೇಶಪೂರ್ವಕವಾಗಿ ಬೈಕ್‌ ಹಿಂಬಾಲಿಸಿ ಕಾರಿನಿಂದ ಡಿಕ್ಕಿ ಹೊಡೆದು ಹತ್ಯೆ ಮಾಡಿರುವುದು ಪತ್ತೆಯಾಗಿತ್ತು. ಬಳಿಕ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಾಯಿಬಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.

ವಾರದೊಳಗೆ 4 ರೋಡ್‌ ರೇಜ್‌ ಪ್ರಕರಣ

ಕಳೆದೊಂದು ವಾರದಲ್ಲಿ ನಗರದಲ್ಲಿ 4 ರೋಡ್‌ ರೇಜ್‌ ಪ್ರಕರಣಗಳು ದಾಖಲಾಗಿವೆ. ಆ.20 ರಂದು ಸರ್ಜಾಪುರ ರಸ್ತೆಯಲ್ಲಿ ದಂಪತಿ ತೆರಳು ತ್ತಿದ್ದ ಕಾರನ್ನು ಅಡ್ಡಗಟ್ಟಿದ ಬೌನ್ಸರ್‌ವೊಬ್ಬ, ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ದೌರ್ಜನ್ಯ ಎಸಗಿದ್ದ. ಆ.20ರಂದು ಇಂದಿರಾನಗರದಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಜಿತಿನ್‌ ಕುಮಾರ್‌ ಎಂಬವರನ್ನು ಬೈಕ್‌ನಲ್ಲಿ ಬಂದು ಅಡ್ಡಗಟ್ಟಿದ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಆರ್‌ .ಟಿ.ನಗರದಲ್ಲೂ ಕಾರು ಚಾಲಕನ ಅಡ್ಡಗಟ್ಟಿದ ಬೈಕ್‌ ಸವಾರ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದ. ಆ.21ರಂದು ವಿದ್ಯಾರಣ್ಯಪುರದಲ್ಲಿ ಕಾರಿಗೆ ಆಕಸ್ಮಿಕವಾಗಿ ಬೈಕ್‌ ತಗುಲಿದಾಗ, ಚೇಸ್‌ ಮಾಡಿ ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆಸಿ ಸವಾರನನ್ನು ಹತ್ಯೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next