ಬೆಂಗಳೂರು: ಡಿ.ಜೆ. ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಪಾಲಿಕೆ ಸದಸ್ಯರಿಗೆ ನೋಟಿಸ್ ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಇದು ಬ್ಲ್ಯಾಕ್‌ಮೇಲ್ ತಂತ್ರ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮೇಲೂ ಒತ್ತಡ ಹೇರಲಾಗುತ್ತಿದೆ ಎಂದು ದೂರಿದ್ದಾರೆ. ಇದಕ್ಕೆ ಹಾವೇರಿಯಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಯಾರನ್ನೂ ಬ್ಲ್ಯಾಕ್‌ಮೇಲ್ ಮಾಡುತ್ತಿಲ್ಲ. ಈ ನೆಲದ ಕಾನೂನು ಬಗ್ಗೆ ಡಿ.ಕೆ. ಶಿವಕುಮಾರ್ ಅವರಿಗೆ ಗೊತ್ತಿದೆ ಎಂದುಕೊಂಡಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಡಿ.ಕೆ.ಶಿ., ನಮ್ಮ ಪಾಲಿಕೆ ಸದಸ್ಯರನ್ನು ಹೆದರಿಸಲಾಗುತ್ತಿದೆ. ಸರಕಾರದ ವೈಫಲ್ಯ ಮುಚ್ಚಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಘಟನೆಯಲ್ಲಿ ಗೃಹ ಸಚಿವರ ವೈಫಲ್ಯವೇ ಹೆಚ್ಚು ಎಂದು ಆರೋಪಿಸಿದರು.
ಶೃಂಗೇರಿ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲವನ್ನೂ ನಾವು ಗಮನಿಸುತ್ತಿದ್ದೇವೆ. ಅಲ್ಲಿನ ಘಟನೆಯನ್ನು ಮುಚ್ಚಿಹಾಕೋ ಪ್ರಯತ್ನ ನಡೆಸಿದ್ದಾರೆ ಎಂದರು.
ಹಾವೇರಿಯಲ್ಲಿ ಮಾತನಾಡಿದ ಗೃಹ ಸಚಿವ ಬೊಮ್ಮಾಯಿ ಅವರು, ಗಲಭೆಯಲ್ಲಿ ಭಾಗಿಯಾದವರಿಗೆ ಕಾನೂನಾತ್ಮಕವಾಗಿ ನೋಟಿಸ್ ಕೊಟ್ಟಿದ್ದೇವೆ. ತಪ್ಪಿಲ್ಲ ಎಂದರೆ ಹೆದರುವುದೇಕೆ? ಎಲ್ಲವೂ ಕಾನೂನು ಪ್ರಕಾರ ನಡೆಯುತ್ತಿದೆ. ಇದರಲ್ಲಿ ಬ್ಲಾಕ್‌ವೆುಲ್ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಗಲಭೆಯಲ್ಲಿ ಮೃತರಾದವರಿಗೆ ಮಾಜಿ ಸಚಿವ ಜಮೀರ್ ಅಹ್ಮದ್ ಪರಿಹಾರ ಘೋಷಿಸಿರುವುದು ಅವರು ಯಾರ ಪರವಾಗಿದ್ದಾರೆಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಹೇಳಿದರು.