Advertisement

ಬೆಂಗಳೂರು ಆಯ್ತು, ಈಗ ಲೈಂಗಿಕ ದೌರ್ಜನ್ಯದ ಸರದಿ ದೆಹಲಿಯದ್ದು!

04:57 PM Jan 05, 2017 | udayavani editorial |

ಹೊಸದಿಲ್ಲಿ : ಹೊಸ ವರ್ಷದ ಹಿಂದಿನ ರಾತ್ರಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದಂತಹ ಅಮಾನುಷ ಲೈಂಗಿಕ ದೌರ್ಜನ್ಯ  ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲೂ ನಡೆದಿರುವುದು ಈಗ ತಡವಾಗಿ ವರದಿಯಾಗಿದೆ. 

Advertisement

ಸಿಸಿಟಿವಿಯಲ್ಲಿ  ದಾಖಲಾಗಿರುವ ಚಿತ್ರಿಕೆಯಲ್ಲಿ ಕಂಡು ಬರುವಂತೆ ಮದ್ಯದ ಅಮಲಿನಲ್ಲಿದ್ದ ಕಾಮುಕರಿಂದ ಮಹಿಳೆಯೋರ್ವರು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುವುದನ್ನು ತಪ್ಪಿಸಲು ಯತ್ನಿಸಿದ ನಾಲ್ವರು ಪೊಲೀಸರ ಮೇಲೆ ಆ ಕಾಮಾಂಧ ತರುಣರು ಹಲ್ಲೆ ನಡೆಸಿದ್ದಾರೆ. 

ಈಶಾನ್ಯ ದಿಲ್ಲಿಯ ಮುಖರ್ಜಿ ನಗರದಲ್ಲಿ ನಡೆದಿರುವ ಈ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದ ಸಣ್ಣ ವಯಸ್ಸಿನ ಮಹಿಳೆಯೋರ್ವರು ರಾತ್ರಿಯ ವೇಳೆ ತಮ್ಮ ಬೈಕಿನಲ್ಲಿ ಬರುತ್ತಿದ್ದರು. ಮದ್ಯದ ಅಮಲಿನಲ್ಲಿದ ನಾಲ್ವರು ಕಾಮುಕರು ಆಕೆಯನ್ನು ಬೈಕಿನಿಂದ ಕೆಳಗೆಳೆದು ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾರೆ.

ಇದನ್ನು ತಪ್ಪಿಸಲು ಮುಂದಾದ ಪೊಲೀಸರ ಮೇಲೆ ಈ ಯುವಕರು ಹಲ್ಲೆ ಮಾಡಿ ಅವರನ್ನು ಗಾಯಗೊಳಿಸಿದ್ದಾರೆ; ಮಾತ್ರವಲ್ಲದೆ ಪೊಲೀಸ್‌ ವಾಹನ ಮತ್ತು ಚೆಕ್‌ ಪೋಸ್ಟ್‌  ಮೇಲೂ ಅವರು ದಾಳಿ ನಡೆಸಿದ್ದಾರೆ. 

ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವಂತೆ ಈ ಕಾಮುಕ ತರುಣರು ಎಂಟ್ರೆನ್ಸ್‌ ಪರೀಕ್ಷೆಗೆ ಕೂರಲು ಕೋಚಿಂಗ್‌ ಪಡೆಯುವ ಸಲುವಾಗಿ ಈ ಪ್ರದೇಶದ ಪಿಜಿ ಅಥವಾ ಹಾಸ್ಟೆಲ್‌ಗ‌ಳಲ್ಲಿ ಉಳಿದುಕೊಂಡವರಾಗಿದ್ದಾರೆ. 

Advertisement

ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಮುಂದಾಗಿ ಹಲ್ಲೆಗೆ ಗುರಿಯಾದ ಎಎಸ್‌ಐ ಪ್ರಕಾಶ್‌ ಅವರಿಗೆ ತಲೆಗೆ ಗಾಯಗಳಾಗಿವೆ. ಇನ್ನೂ ಮೂವರು ಪೊಲೀಸರಿಗೆ ಗಾಯಗಳಾಗಿವೆ. 

ಮದ್ಯದ ಅಮಲಿನಲ್ಲಿದ್ದ ಕಾಮುಕ ದಾಳಿಕೋರ ಯುವಕರಿಂದ ಮತ್ತಷ್ಟು ಹಾನಿಯಾಗುವುದನ್ನು ತಪ್ಪಿಸಿಲು ಒಡನೆಯೇ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿದೆ. ಒಂದು ತಾಸಿಗೂ ಕಡಿಮೆ ಅವಧಿಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ. 

ಹಾಗಿದ್ದರೂ ಈ ತನಕ ಯಾರನ್ನೂ ಬಂಧಿಸಲಾಗಿಲ್ಲ. ಪೊಲೀಸರೀಗ ಸಿಸಿಟಿವಿ ಚಿತ್ರಿಕೆಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಚುರುಕಿನಿಂದ ತನಿಖೆ ಮುಂದುವರಿದಿದೆ.  

ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಅವರು ಈ ಪ್ರಕರಣದ ತನಿಖೆಗೆ ಆದೇಶ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next