Advertisement

Bengaluru: 140 ರೌಡಿಶೀಟರ್‌ ಮನೆಗಳ ಮೇಲೆ ಪೊಲೀಸ್‌ ದಾಳಿ

11:45 AM Aug 28, 2024 | Team Udayavani |

ಬೆಂಗಳೂರು: ಈಶಾನ್ಯ ವಿಭಾಗದ ದೇವನಹಳ್ಳಿ ಹಾಗೂ ಯಲಹಂಕ ಉಪ ವಿಭಾಗದ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಮುಂಜಾನೆ 5 ಗಂಟೆಯಿಂದ 11 ಗಂಟೆವರೆಗೂ ಸುಮಾರು 140 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

Advertisement

ಯಲಹಂಕ, ಕೊಡಿಗೇಹಳ್ಳಿ, ಅಮೃತಹಳ್ಳಿ, ವಿದ್ಯಾರಣ್ಯಪುರ ಸೇರಿ ಹಲವು ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ 5 ಗಂಟೆ ಸುಮಾರಿಗೆ 120ಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಯಿತು. ವಿದ್ಯಾರಣ್ಯಪುರದ ಶ್ರೀನಿಧಿಲೇಔಟ್‌ನ ನಿವಾಸಿ ರೌಡಿಶೀಟರ್‌ ಶಾಹಿಲ್‌ ಎಂಬಾತ ಹಾಸಿಗೆ ಕೆಳಗೆ ಮಾರಕಾಸ್ತ್ರವೊಂದು ಪತ್ತೆಯಾಗಿದ್ದು, ಅದನ್ನು ಜಪ್ತಿ ಮಾಡಲಾಗಿದೆ.

ಶಾಹಿಲ್‌ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ.

ಅಲ್ಲದೇ 10ಕ್ಕೂ ಹೆಚ್ಚು ರೌಡಿಗಳ ಮನೆಗಳಲ್ಲಿ ತಪಾಸಣೆ ನಡೆಸಿ, ರೌಡಿ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿ, ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಯಲಹಂಕ ಪೊಲೀಸ್‌ ಠಾಣಾ ವ್ಯಾಪ್ತಿಯ ಕಟ್ಟಿಗೆಹಳ್ಳಿ, ಯಲಹಂಕ ನ್ಯೂಟೌನ್‌, ಪಾಲನಹಳ್ಳಿ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆಯಲ್ಲಿ ಭಾಗಿಯಾದವರ 20ಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

Advertisement

ಅಪರಾಧ ಹಿನ್ನೆಲೆಯುಳ್ಳವರ ವಾಸಸ್ಥಳ, ವಿಳಾಸ, ಆದಾಯದ ಮೂಲ ಮತ್ತಿತರ ಮಾಹಿತಿ ಕಲೆ ಹಾಕಲಾಗಿದೆ. ಕೆಲವರನ್ನು ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕೋರ್ಟ್‌ಗೆ ಗೈರಾಗಿ ತಲೆಮರೆಸಿಕೊಂಡಿದ್ದ ರೌಡಿಗಳು ಕೆಲವು ರೌಡಿಗಳು ಇತ್ತೀಚೆಗೆ ಸಣ್ಣಪುಟ್ಟ ಗಲಾಟೆ ಹಾಗೂ ವಸೂಲಿ ದಂಧೆಯಲ್ಲಿ ತೊಡಗಿದ್ದರು. ಅಲ್ಲದೇ ವಾರಂಟ್‌ ಜಾರಿ ಆಗಿದ್ದರೂ ಕೆಲವು ರೌಡಿಗಳು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದರು. ರೌಡಿ ಚಟುವಟಿಕೆ ನಿಯಂತ್ರಣಕ್ಕೆ ತರಲು ಕೋರ್ಟ್‌ ಪೊಲೀಸರಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next