ಬೆಂಗಳೂರು: ಇಲ್ಲಿನ ಇಂದಿರಾನಗರದ ಸರ್ವಿಸ್ ಅಪಾರ್ಟ್ಮೆಂಟ್ನಲ್ಲಿ ಅಸ್ಸಾಂ ಯುವತಿ ಹತ್ಯೆಯಾದ ಮೂರು ದಿನಗಳ ನಂತರ ಪೊಲೀಸರು ಶುಕ್ರವಾರ(ನ29) ಆರೋಪಿಯನ್ನು ಬಂಧಿಸಿದ್ದಾರೆ.
ಮಾಯಾ ಗೊಗೊಯ್ (19) ಳನ್ನು ಆಕೆಯ ಪ್ರಿಯಕರ ಆರವ್ ಹನೋಯ್ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆಗೈದಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
“ನಾವು ಆರೋಪಿಯನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದು ಸದ್ಯ ಆತನನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೂರ್ವ ವಿಭಾಗದ ಡಿಸಿಪಿ ಡಿ. ದೇವರಾಜ್ ತಿಳಿಸಿದ್ದಾರೆ. ಆರೋಪಿಯನ್ನು ಎಲ್ಲಿ ಬಂಧಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.
ಹತ್ಯೆ ಪ್ರಕರಣ ಸಂಬಂಧ ಆರೋಪಿಯ ಪತ್ತೆಗಾಗಿ ಡಿ.ದೇವರಾಜ್ 3 ವಿಶೇಷ ತಂಡ ರಚಿಸಿದ್ದರು. ಆರೋಪಿಯ ಮೊಬೈಲ್ ನೆಟ್ವರ್ಕ್, ಸಿಸಿ ಕೆಮರಾ ದೃಶ್ಯಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿ, ಹೋಟೆಲ್ನಿಂದ ಸುಮಾರು ದೂರ ಹೋಗುತ್ತಿದ್ದಂತೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಕ್ಯಾಬ್ನಲ್ಲಿ ಪರಾರಿಯಾಗಿದ್ದ. ಕ್ಯಾಬ್ ಸಂಚರಿಸಿದ ಮಾರ್ಗದಲ್ಲಿನ ಸಿಸಿ ಕೆಮರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿ ಪರಿಶೀಲಿಸಲಾಗಿತ್ತು.
ಪೂರ್ವಯೋಜಿತ ಸಂಚು ರೂಪಿಸಿ, ಮಾಯಾ ಗೊಗೋಯಿಳನ್ನು ಕೊಲೆಗೈದಿದ್ದ. ಮೊದಲಿಗೆ ನೈಲಾನ್ ಹಗ್ಗದಿಂದ ಆಕೆಯ ಕುತ್ತಿಗೆ ಬಿಗಿದು, ಬಳಿಕ ಚಾಕುವಿನಿಂದ ಆಕೆಯ ಎದೆಗೆ ಇರಿದು ಪರಾರಿಯಾಗಿದ್ದ.
ಇನ್ನು ಮೃತ ಮಾಯಾ, ನಗರದಲ್ಲೇ ವಾಸವಿರುವ ತನ್ನ ಅಕ್ಕನಿಗೆ ಶನಿವಾರ ಕರೆ ಮಾಡಿ, ಕಚೇರಿಯಲ್ಲಿ ಪಾರ್ಟಿ ಇರುವುದರಿಂದ ರಾತ್ರಿ ಮನೆಗೆ ಬರುವುದಿಲ್ಲ ಎಂದು ಹೇಳಿದ್ದಾಳೆ. ಮಾರನೇ ದಿನ ಭಾನುವಾರ ಸಹ ಅಕ್ಕನ ಮೊಬೈಲ್ಗೆ ಸಂದೇಶ ಕಳುಹಿಸಿ ಪಾರ್ಟಿಯ ಕಾರಣಕ್ಕೆ ಇಂದು ರಾತ್ರಿ ಕೂಡ ರಾತ್ರಿ ಮನೆಗೆ ಬರುವುದಿಲ್ಲ ಎಂದಿದ್ದಳು. ಆ ನಂತರ ಸೋಮವಾರದಿಂದ ಮಾಯಾ, ತನ್ನ ಅಕ್ಕನಿಗೆ ಕರೆ ಮಾಡಿಲ್ಲ ಮತ್ತು ಸಂದೇಶ ಸಹ ಕಳುಹಿಸಿರಲಿಲ್ಲ. ಈ ಅಂಶವನ್ನು ಗಮನಿಸಿದರೆ ಭಾನುವಾರ ರಾತ್ರಿಯೇ ಕೊಲೆಯಾಗಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಮಂಗಳವಾರ ಸರ್ವಿಸ್ ಅಪಾರ್ಟ್ಮೆಂಟ್ನಲ್ಲಿ ಭಾಗಶಃ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.