Advertisement

ಬೆಂಗಳೂರು-ಮೈಸೂರು-ಮಂಗಳೂರು ರೈಲು ಕುಂದಾಪುರ-ಕಾರವಾರದ ವರೆಗೆ ವಿಸ್ತರಣೆಗೆ ಹೆಚ್ಚಿದ ಬೇಡಿಕೆ

09:08 AM Sep 22, 2022 | Team Udayavani |

ಕುಂದಾಪುರ: ಮಂಗಳೂರಿನಿಂದ ಮೈಸೂರು ಮೂಲಕ ಬೆಂಗಳೂರಿಗೆ ಸಂಚರಿಸುವ ರೈಲನ್ನು ಕಾರವಾರದವರೆಗೆ ವಿಸ್ತರಿಸಬೇಕೆಂಬ ಬೇಡಿಕೆ ಅನೇಕ ದಿನಗಳಿಂದ ಕೇಳಿ ಬರುತ್ತಿದೆ. ಆದರೆ ಈ ಪ್ರಕ್ರಿಯೆ ಕೊನೆಯ ಹಂತದಲ್ಲಿರುವಾಗ ದ.ಕ. ಸಂಸದರು ರೈಲ್ವೇ ಇಲಾಖೆಗೆ ಪತ್ರ ಬರೆದು ಆಕ್ಷೇಪಿಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದರಿಂದಾಗಿ ಈ ರೈಲು ಕಾರವಾರದವರೆಗೆ ಸಂಚರಿಸಲು ಅಡ್ಡಿಯಾಗಿದೆ.

Advertisement

ಬೆಂಗಳೂರು-ಮೈಸೂರು ರೈಲನ್ನು ಮಂಗಳೂರಿ ನಿಂದ ಕಾರವಾರದ ವರೆಗೆ ವಿಸ್ತರಿಸಬೇಕೆಂಬ ಬೇಡಿಕೆಗೆ ಸ್ಪಂದಿಸಿದ ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರು ವಾರದ 3 ದಿನ ಇದ್ದ ರೈಲನ್ನು 6 ದಿನ ಸಂಚರಿಸುವಂತೆ ಮಾಡಿದ್ದಲ್ಲದೆ ಹೆಚ್ಚಿನ ಬೋಗಿಯೊಂದಿಗೆ ಕಾರವಾರಕ್ಕೆ ವಿಸ್ತರಿಸಲು ನೈಋತ್ಯ ರೈಲ್ವೇಗೆ ಮನವಿ ಮಾಡಿದ್ದರು. ಕೊಂಕಣ ರೈಲ್ವೇ, ದಕ್ಷಿಣ ರೈಲ್ವೇ ಸಹ ಸಮ್ಮತಿಸಿದ್ದು ಪ್ರಕ್ರಿಯೆ ಕೊನೆಯ ಹಂತದಲ್ಲಿತ್ತು.

ಕೇರಳ ಲಾಬಿ: ಆರೋಪ
ಮೈಸೂರು ರೈಲು ಕಾರವಾರದ ವರೆಗೆ ಸಂಚರಿಸಲಿದೆ ಎನ್ನುವಾಗಲೇ ಮಂಗಳೂರಿನವರಿಗೆ ಹೆಚ್ಚಿನ ಆಸನ ಸಿಗದ ಕಾರಣ ಕಾರವಾರದ ವರೆಗೆ ವಿಸ್ತರಿಸುವುದು ಬೇಡ ಎಂದು ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ರೈಲ್ವೇ ಇಲಾಖೆಗೆ ಪತ್ರ ಬರೆದಿದ್ದಾರೆ. ಸಂಸದರ ಈ ನಡೆಗೆ ಉಡುಪಿ, ಕುಂದಾಪುರ, ಬೈಂದೂರು, ಕಾರವಾರ ಭಾಗದ ಪ್ರಯಾಣಿಕರು, ರೈಲ್ವೇ ಪ್ರಯಾಣಿಕರ ಸಮಿತಿಗಳಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಇದರಲ್ಲಿ ಕೇರಳ ಲಾಬಿಯು ಅಡಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಪರ – ವಿರೋಧ: ಚರ್ಚೆ
ಮಂಗಳೂರಿಗೆ ವಿಮಾನ ಹಾಗೂ ಹೆಚ್ಚಿನ ರೈಲುಗಳ ಸಂಚಾರ ಇರುವುದರಿಂದ, ಈ ಹೊಸ ರೈಲು ಕಾರವಾರದ ವರೆಗೆ 7 ದಿನ ಹೆಚ್ಚಿನ ಬೋಗಿಯೊಂದಿಗೆ ಸಂಚರಿಸಿದರೆ ಉಡುಪಿ, ಕುಂದಾಪುರ, ಬೈಂದೂರು, ಕಾರವಾರ ಭಾಗದ ಪ್ರಯಾಣಿಕರಿಗೆ ಮೈಸೂರು, ಬೆಂಗಳೂರಿಗೆ ತೆರಳಲು ಅನುಕೂಲವಾಗಲಿದೆ ಎನ್ನುವುದು ಕುಂದಾಪುರ ರೈಲ್ವೇ ಸಮಿತಿಯವರ ವಾದ. ಈ ಮೈಸೂರು ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದೇ ಇರುವುದರಿಂದ ನಮಗೆ ಸಮಸ್ಯೆಯಾಗಲಿದೆ. ಮಾತ್ರವಲ್ಲದೆ ಇಲ್ಲಿನವರಿಗೆ ಟಿಕೆಟ್‌ ಸಹ ಸಿಗುವುದಿಲ್ಲ ಎನ್ನುವುದು ಮಂಗಳೂರು ಭಾಗದ ರೈಲ್ವೇ ಸಮಿತಿಯವರ ವಾದವಾಗಿದೆ. ಆದರೆ ಈ ರೈಲು ಸೆಂಟ್ರಲ್‌ಗೆ ಬಾರದಂತೆ ತಡೆದಿರುವುದು ನಾವಲ್ಲ, ಅದು ಇಲಾಖೆಯ ತಾಂತ್ರಿಕ ತೊಂದರೆಯಿಂದ ಹೀಗಾಗಿದೆ ಎನ್ನುವುದು ಕುಂದಾಪುರದವರ ವಾದ.

ಸಚಿವರಿಗೆ ಮತ್ತೆ ಮನವಿ
ಕೇಂದ್ರ ರೈಲ್ವೇ ಸಚಿವರನ್ನು ಬುಧವಾರ ಮತ್ತೆ ಭೇಟಿ ಮಾಡಿದ ಪ್ರತಾಪ್‌ ಸಿಂಹ, ಹೆಚ್ಚುವರಿ ಬೋಗಿಯೊಂದಿಗೆ ಕಾರವಾರದ ವರೆಗೂ ವಿಸ್ತರಿಸಿ ಎನ್ನುವುದಾಗಿ ಮನವಿ ಮಾಡಿಕೊಂಡಿದ್ದಾರೆ.

Advertisement

ಮೈಸೂರು ರೈಲನ್ನು ಮಂಗಳೂರಿಗೆ ಮಾತ್ರ ಸೀಮಿತಗೊಳಿಸಿದರೆ ಕರಾವಳಿ ಭಾಗಕ್ಕಿಂತ ಕೇರಳದವರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ದ.ಕ. ಸಂಸದರ ದಾರಿ ತಪ್ಪಿಸುವ ಕೆಲಸ ಆಗಿದೆಯಾ ಎನ್ನುವ ಸಂಶಯ ಮೂಡಿದೆ. ಈ ರೈಲು ಹೆಚ್ಚಿನ ಬೋಗಿಯೊಂದಿಗೆ ಸಂಚರಿಸಿದರೆ ಮಂಗಳೂರಿಗರಿಗೂ ಅನುಕೂಲವಾಗಲಿದೆ.
– ಗಣೇಶ್‌ ಪುತ್ರನ್‌, ಅಧ್ಯಕ್ಷರು, ಕುಂದಾಪುರ ರೈಲ್ವೇ ಪ್ರಯಾಣಿಕರ ಸಮಿತಿ

ಇದನ್ನೂ ಓದಿ :ಗಂಗಾವತಿ: ವೈಭವಯುತವಾಗಿ 5 ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next