ಬೆಂಗಳೂರು: ವಿವಾಹಿತ ಮಹಿಳೆಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ಪಾಗಲ್ ಪ್ರೇಮಿಯೊಬ್ಬ ಆಕೆಗೆ ಚಾಕುವಿನಿಂದ ಇರಿದು ಹತ್ಯೆಗೈದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಟ್‌ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಮೊಹುವಾ ಮಂಡಲ್ (26) ಹತ್ಯೆಗೀಡಾದ ಮಹಿಳೆ. ಕೃತ್ಯ ಎಸಗಿದ ಬಳಿಕ ಆರೋಪಿ ಮಿಥುನ್ ಮಂಡಲ್(26) ಎಂಬಾತ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಶ್ಚಿಮ ಬಂಗಾಳ ಮೂಲದ ಮೊಹುವಾ ಮಂಡಲ್, ಈಕೆಯ ಪತಿ ಹರಿಪ್ರಸಾದ್ ಮಂಡಲ್ 3 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ವೈಟ್‌ಫೀಲ್ಡ್ ಸಮೀಪದ ಶೆಡ್‌ನಲ್ಲಿ ತಮ್ಮ ಮಗುವಿನ ಜತೆ ವಾಸವಾಗಿದ್ದರು. ಮೊಹುವಾ ಮಂಡಲ್ ಖಾಸಗಿ ಕಾಲೇಜಿನಲ್ಲಿ ಹೌಸ್ ಕಿಪಿಂಗ್ ಕೆಲಸ ಮಾಡುತ್ತಿದ್ದರು. ಪತಿ ಹರಿಪ್ರಸಾದ್ ಮಂಡಲ್ ರ್ಯಾಪಿಡೋ ಹಾಗೂ ಇತರೆ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದರು.
ಇನ್ನು ಎರಡೂವರೆ ವರ್ಷಗಳ ಹಿಂದೆ ಆರೋಪಿ ಮಿಥುನ್ ಮಂಡಲ್ ನಗರಕ್ಕೆ ಬಂದು ಪಿಜಿಯೊಂದರಲ್ಲಿ ವಾಸವಾಗಿದ್ದ. ಈತ ಮಿಥುನ್ ಮಂಡಲ್, ಮೊಹುವಾ ಮಂಡಲ್ ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ. ಆರೋಪಿ ಮತ್ತು ಮಹಿಳೆ ಒಂದೇ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಪರಿಚಯವಾಗಿದೆ. ಬಳಿಕ ಆರೋಪಿ, ಮೊಹುವಾಗೆ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಆದರೆ, ಆಕೆ ತನಗೆ ಈಗಾಗಲೇ ಮದುವೆಯಾಗಿದ್ದು, ಮಗು ಕೂಡ ಇದೆ ಎಂದು ಹೇಳಿ ನಿರಾಕರಿಸಿದ್ದಳು.
ಆದರೂ ಆರೋಪಿ, ಗಂಡ ಮತ್ತು ಮಗುವನ್ನು ಬಿಟ್ಟು ತನ್ನೊಂದಿಗೆ ಬರುವಂತೆ ಒತ್ತಾಯಿಸುತ್ತಿದ್ದ. ಅದರಿಂದ ಬೇಸತ್ತಿದ್ದ ಮೊಹುವಾ ಮಂಡಲ್, ಆ ಕಾಲೇಜು ಬಿಟ್ಟು ಬೇರೊಂದು ಶಾಲೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಆದರೂ ಆರೋಪಿ, ಪದೇ ಪದೆ ಮಹಿಳೆಗೆ ತೊಂದರೆ ಕೊಡುತ್ತಿದ್ದ. ಬುಧವಾರ ಸಂಜೆ ಪತಿ ಹರಿಪ್ರಸಾದ್ ಮಂಡಲ್ ಕಾರ್ಯನಿಮಿತ್ತ ಹೊರಗಡೆ ಹೋಗಿದ್ದರು. ಈ ವೇಳೆ ಮನೆಗೆ ಬಂದ ಆರೋಪಿ, ಮೊಹುವಾ ಮಂಡಲ್‌ಗೆ ಮತ್ತೂಮ್ಮೆ ತನ್ನೊಂದಿಗೆ ಬರುವಂತೆ ಒತ್ತಾಯಿಸಿದ್ದಾನೆ. ಅದಕ್ಕೆ ಆಕೆ ನಿರಾಕರಿಸಿದಾಗ, ಆರೋಪಿ ತನ್ನ ಬಳಿಯಿದ್ದ ಚಾಕುನಿಂದ ಆಕೆಯ ಹೊಟ್ಟೆ ಹಾಗೂ ಎದೆ ಭಾಗಕ್ಕೆ ನಾಲ್ಕೈದು ಬಾರಿ ಇರಿದು ಹತ್ಯೆಗೈದು ಪರಾರಿಯಾಗಿದ್ದ.
ಕೆರೆ ಸಮೀಪದಲ್ಲಿ ಆತ್ಮಹತ್ಯೆ: ಕೃತ್ಯ ಎಸಗಿದ ಬಳಿಕ ಆರೋಪಿ, ನಲ್ಲೂರು ಕೆರೆ ಸಮೀಪದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮತ್ತೂಂದೆಡೆ ಆರೋಪಿಯ ಹುಡುಕಾಟದಲ್ಲಿದ್ದಾಗ ಅಪರಿಚಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ಸ್ಥಳಕ್ಕೆ ಹೋದಾಗ ಮಿಥುನ್ ಮಂಡಲ್ ಎಂಬುದು ಗೊತ್ತಾಗಿದೆ.
ಏನಿದು ಘಟನೆ? ಪಶ್ಚಿಮ ಬಂಗಾಳದ ಮೊಹುವಾ, ಹರಿಪ್ರಸಾದ್ ದಂಪತಿ ವೈಟ್‌ಫೀಲ್ಡ್ ವಾಸ ಮೊಹುವಾ ಕೆಲಸಕ್ಕಿದ್ದ ಕಾಲೇಜಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಆರೋಪಿ ಪತಿ ಹಾಗೂ, ಮಗು ಇದ್ದರೂ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ ಆರೋಪಿ ಮಿಥುನ್ ವಿಷಯ ತಿಳಿದು ಮಿಥನ್‌ಗೆ ಪತಿ ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷ್ಯ ಮೊಹುವಾಮನೆಗೆ ಬಂದು ತನ್ನೊಂದಿಗೆ ಬರುವಂತೆ ಪೀಡಿಸಿದ ಪಾಗಲ್ ಪ್ರೇಮಿ ಮೊಹುವಾ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಹೊಟ್ಟೆ, ಎದಿಗೆ ಇರಿದು ಬರ್ಬರ ಹತ್ಯೆ ಬಳಿಕ ಕೆರೆ ಸಮೀಪದ ಮರವೊಂದಕ್ಕೆ ನೇಣುಬಿಗಿದುಕೊಂಡ ಆರೋಪಿ