Advertisement

ಬೆಂಗಳೂರು-ಕಾರವಾರ ರೈಲಿಗೆ ಪಾರದರ್ಶಕ ಬೋಗಿ : ವಾರಕ್ಕೆ 3 ಪ್ರಯಾಣ, ಜು.7ರಿಂದ ಪ್ರಯಾಣ ಆರಂಭ

09:06 PM Jul 04, 2021 | Team Udayavani |

ಕುಂದಾಪುರ: ಬೆಂಗಳೂರು-ಕಾರವಾರ ರೈಲಿಗೆ ಗಾಜಿನ ಮೇಲ್ಛಾವಣಿ ಹೊಂದಿರುವ ಅತ್ಯಾಧುನಿಕ ಎರಡು ಬೋಗಿಗಳನ್ನು ಅಳವಡಿಸುವುದಾಗಿ ನೈಋತ್ಯ ರೈಲ್ವೆ ಘೋಷಿಸಿದೆ. ಜು.7ರಿಂದ ಈ ಬೋಗಿಯಲ್ಲಿ ತೆರಳಲು ಜು. 3ರಿಂದ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದೆ. ಕರ್ನಾಟಕದ ಮೊದಲ, ವಿದೇಶೀ ರೈಲನ್ನು ಹೋಲುವ ವಿಸ್ಟಾಡೋಮ್‌ ಬೋಗಿಯ ರೈಲು ಇದಾಗಿದೆ.

Advertisement

ಪ್ರಯಾಣಸುಖ
ಭಾರತೀಯ ರೈಲ್ವೆ ನೀಡಿರುವ ವಿಸ್ಟಾಡೋಮ್‌ ಕೋಚ್‌ ಎಸಿ ರೈಲು ಬೋಗಿ ಮೂಲಕ ಬೆಂಗಳೂರು -ಮಂಗಳೂರು-ಕಾರವಾರ ನಡುವೆ ಸಂಚರಿಸುವಾಗ ಹಗಲು ಹೊತ್ತಿನಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಹಾಸನ, ಸಕಲೇಶಪುರ ಮಾರ್ಗದ ಮೂಲಕ 55 ಕಿ.ಮೀ. ವ್ಯಾಪ್ತಿ ಹಸಿರುಮಯ ಅರಣ್ಯ, ಜಲಪಾತಗಳು, ಸೇತುವೆಗಳ ವಿಹಂಗಮ ನೋಟ, ಪಶ್ಚಿಮ ಘಟ್ಟದ ಸೌಂದರ್ಯದ ರಾಶಿಯ ಸೊಬಗನ್ನೂ ರೈಲಿನಲ್ಲಿ ಕುಳಿತು ಪ್ರಯಾಣಿಕರು ಆನಂದಿಸಬಹುದು. ಕಾರ್ಮುಗಿಲ ದಾರಿಯಲ್ಲಿ, ಹಸಿರುಡುಗೆಯ ನಡುವೆ ಹಾದ ರೈಲ್ವೆ ಹಳಿಯಲ್ಲಿ, ಬಿರುಬೀಸು ಮಳೆಯಲ್ಲಿ ರೈಲು ಸಂಚಾರ ಒಂದು ವಿಶಿಷ್ಟ ಅನುಭವವಾಗಿದೆ.

ಏನಿದು ವಿಸ್ಟಾಡೋಮ್‌?
ರೈಲ್ವೆಯ ಚೆನ್ನೈಯ ಕಾರ್ಖಾನೆಯಲ್ಲಿ ಯುರೋಪ್‌ ಮಾದರಿಯಲ್ಲಿ ಇದನ್ನು ತಯಾರಿಸಲಾಗಿದೆ. ಎರಡೂ ಬದಿ ತಲಾ 5 ದೊಡ್ಡದಾದ ಗಾಜಿನ ಕಿಟಕಿಗಳು, ಸುರಕ್ಷಿತ ಗಾಜಿನ ಮೇಲ್ಛಾವಣಿ, ಸಂಪೂರ್ಣ ಹವಾನಿಯಂತ್ರಿತ ಬೋಗಿ ಇದಾಗಿದ್ದು ಎಲ್‌ಇಡಿ ದೀಪ, ಜಿಪಿಎಸ್‌ ಆಧಾರಿತ ಮಾಹಿತಿ ವ್ಯವಸ್ಥೆ, 180 ಡಿಗ್ರಿ ಕೋನದಲ್ಲಿ ಸುತ್ತುವ 44 ಸುಖಾಸನಗಳು ಇವೆ. ಮೈಕ್ರೋವೇವ್‌ ಓವನ್‌, ಪುಟ್ಟ ರೆಫ್ರಿಜರೇಟರ್‌ಗಳು, ಸ್ವಯಂಚಾಲಿತ ಬಾಗಿಲುಗಳು, ವಿಮಾನದಲ್ಲಿದ್ದಂತೆ ಸೀಟಿನ ಹಿಂದೆ ಚಹಾ, ತಿಂಡಿ ಇಡುವ ಪುಟ್ಟದಾದ ಮಡಚಬಹುದಾದ ಸ್ನ್ಯಾಕ್‌ ಟೇಬಲ್‌, ಡಿಜಿಟಲ್‌ ಡಿಸ್‌ಪ್ಲೇ ಸ್ಕ್ರೀನ್‌, ಸ್ಪೀಕರ್‌, ತಂಪಾದ ನೀರು, ಕಾಫಿ ಮಾಡುವ ಸಾಧನ, ಲಗೇಜ್‌ ಇಡಲು ದೊಡ್ಡ ಜಾಗ, ವೈ ಫೈ, ಪ್ರಯಾಣದ ವೈಶಿಷ್ಟé ವಿವರಣೆಗೆ ಸಿಬ್ಬಂದಿ, ಸಿಸಿ ಕ್ಯಾಮ ರಾ, ಅಗ್ನಿಶಮನ ವ್ಯವಸ್ಥೆ ಸೇರಿ ಹಲವು ಸೌಲಭ್ಯಗಳಿವೆ.

ಇದನ್ನೂ ಓದಿ : ಫಿಲಿಪ್ಪೀನ್ಸ್‌ ನಲ್ಲಿ ವಾಯುಪಡೆ ವಿಮಾನ ಪತನ: 31 ಯೋಧರು ಜೀವಂತ ದಹನ

ಎಲ್ಲೆಲ್ಲಿದೆ?
ಸಾಮಾನ್ಯವಾಗಿ ದೇಶದ ಹಲವು ಪ್ರವಾಸಿತಾಣಗಳನ್ನು ಸಂಪರ್ಕಿಸುವ ರೈಲಿನಲ್ಲಿ ಪ್ರವಾಸದ ಆಸ್ವಾದನೆಗೆ ಇದನ್ನು ಬಳಸಲಾಗುತ್ತಿದೆ. ಭಾರತೀಯ ರೈಲ್ವೆ ಇಲಾಖೆ ಆಂಧ್ರದ ಅರಕು ಕಣಿವೆ ಪ್ರದೇಶ, ದಾದಾರ್‌ -ಮಡಗಾಂವ್‌, ಕಾಶ್ಮೀರ, ಡಾರ್ಜಲಿಂಗ್‌, ಶಿಮ್ಲಾ, ನೀಲಗಿರಿ ಮೊದಲಾದೆಡೆ ಈಗಾಗಲೇ ವಿಸ್ಟಾಡೋಮ್‌ ಕೋಚ್‌ ಅಳವಡಿಸಿದೆ.

Advertisement

ವೇಳಾಪಟ್ಟಿ
ಈ ಮಾರ್ಗದಲ್ಲಿ ಸಂಚರಿಸುವ ಮೂರು ರೈಲುಗಳಲ್ಲಿ ದ್ವಿತೀಯ ದರ್ಜೆಯ ಒಂದು ಸಾಮಾನ್ಯ ಕೋಚ್‌ ತೆಗೆದು ತಲಾ ಎರಡು ಯುರೋಪಿಯನ್‌ ಮಾದರಿಯ ವಿಸ್ಟಾಡೋಮ್‌ ಕೋಚ್‌ ಅಳವಡಿಸಲಾಗಿದೆ. ಮಾ.15ರಂದು ಆರಂಭವಾಗಬೇಕಿದ್ದ ಪ್ರಯಾಣ ಜು.7ರಿಂದ ಆರಂಭವಾಗುತ್ತಿದೆ. ವಾರಕ್ಕೆ ಮೂರು ಬಾರಿ ಚಲಿಸುವ ಯಶವಂತಪುರ-ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್‌ ಸ್ಪೆಷಲ್‌ ಜು.7ರಂದು ಯಶವಂತಪುರದಿಂದ ಹೊರಡಲಿದೆ. ವಾರಕ್ಕೆ ಮೂರು ಬಾರಿ ಸಂಚರಿಸುವ ಯಶವಂತಪುರ -ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ಸ್ಪೆಷಲ್‌ ಜು.8ರಂದು ಯಶವಂತಪುರದಿಂದ, ಯಶವಂತಪುರ-ಮಂಗಳೂರು ಜಂಕ್ಷನ್‌-ಯಶವಂತಪುರ ಸ್ಪೆಷಲ್‌ ಎಕ್ಸ್‌ಪ್ರೆಸ್‌ ಜು.10ರಂದು ಯಶವಂತಪುರದಿಂದ ಹೊರಡಲಿದೆ. ಬೆಂಗಳೂರು ಮಂಗಳೂರು ನಡುವೆ ಶತಾಬ್ದಿ ರೈಲಿನ ಎಕ್ಸಿಕ್ಯೂಟಿವ್‌ ದರ್ಜೆ ಪ್ರಯಾಣದರ (413 ಕಿ.ಮೀ.) 1,470 ರೂ.ಗಳನ್ನು ನಿಗದಿ ಮಾಡಲಾಗಿದೆ.

ಬೆಂಗಳೂರು-ಕಾರವಾರ ರೈಲಿನ ಬಳಕೆ ಲಾಕ್‌ಡೌನ್‌ ದಿನಗಳಲ್ಲಿ ಹೆಚ್ಚಾಗಿದ್ದು ಸಾಮಾನ್ಯ ದಿನಗಳಲ್ಲೂ ರೈಲಿನ ಬಳಕೆ ಹೆಚ್ಚಬೇಕು. ವಿಸ್ಟಾಡೋಮ್‌ ಸೌಲಭ್ಯದಂತಹ ಆಕರ್ಷಣೆಯೂ ಪ್ರಯಾಣದಟ್ಟಣೆ ಹೆಚ್ಚಳಕ್ಕೆ ಕಾರಣವಾಗುತ್ತದೆ.
– ಗಣೇಶ್‌ ಪುತ್ರನ್‌ ಅಧ್ಯಕ್ಷರು, ರೈಲ್ವೇ ಯಾತ್ರಿಕರ ಹೋರಾಟ ಸಮಿತಿ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next