Advertisement

ಬೆಂಗಳೂರು-ಜಾಲೂರು ಹೆದ್ದಾರಿ ಅಭಿವೃದ್ಧಿ ಮರೀಚಿಕೆ

01:17 PM Jul 31, 2018 | Team Udayavani |

ಸುಬ್ರಹ್ಮಣ್ಯ: ಶಿರಾಡಿ ಘಾಟಿಗೆ ಪರ್ಯಾಯವಾಗಿ ಹಾಸನ ಭಾಗದಿಂದ ದ.ಕ. ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಬೆಂಗಳೂರು- ಜಾಲೂರು ರಾಜ್ಯ ಹೆದ್ದಾರಿ 85ರ ಬಿಸಿಲೆ ಘಾಟಿ ರಸ್ತೆ ಅಭಿವೃದ್ಧಿ ಅರ್ಧದಲ್ಲೆ ಹೆಣಗಾಡುತ್ತಿದ್ದು, ಈ ರಸ್ತೆ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದೆ. ಸಕಲೇಶಪುರ ಭಾಗದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ‌ ಅತೀ ಹತ್ತಿರದ ಸಂಪರ್ಕ ರಸ್ತೆ ಇದಾಗಿದೆ. ಈ ರಸ್ತೆ ಹಾಸನ ಲೋಕೋಯೋಗಿ ಇಲಾಖೆಯ ಸಕಲೇಶ‌ಪುರ ಉಪವಿಭಾಗ ಮತ್ತು ದ.ಕ. ಜಿಲ್ಲೆ ಲೋಕೋಪಯೋಗಿ ಇಲಾಖೆಗೆ ಸೇರಿದೆ.ಹಾಸನ ವಿಭಾಗದ ಗೊದ್ದುವಿನಿಂದ ಕುಲ್ಕುಂದ ಬಿಸಿಲೆ ಗೇಟ್‌ ತನಕದ 38 ಕಿ.ಮೀ. ರಸ್ತೆಯನ್ನು ಎರಡು ಹಂತದಲ್ಲಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ಆರಂಭಗೊಂಡು ಐದು ವರ್ಷಗಳು ಕಳೆದಿವೆ. ಶೇ. 98ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಅರಣ್ಯ ಇಲಾಖೆ ಆಕ್ಷೇಪ ಸಹಿತ ಹಲವು ತಾಂತ್ರಿಕ ಕಾರಣಗಳು ಅಡ್ಡಿಯಾಗಿದ್ದವು.

Advertisement

ಈ ಮಾರ್ಗದಲ್ಲಿ ಇನ್ನು ಕೇವಲ 2 ಕಿ.ಮೀ. ರಸ್ತೆ ಕಾಂಕ್ರೀಟ್‌ ಕಾಮಗಾರಿ ಬಾಕಿ ಇದ್ದು, ಇದಕ್ಕೆ ಪ್ರತ್ಯೇಕ ಹಣಕಾಸಿನ ಅನುದಾನದ ಆವಶ್ಯಕತೆ ಇರುವ ಕಾರಣ ಅನುದಾನ ಮಂಜೂರುಗೊಂಡ ಬಳಿಕವಷ್ಟೆ ಈ ಅಲ್ಪ ಭಾಗ ಕಾಂಕ್ರೀಟ್‌ ಅಳವಡಿಸಲಾಗುತ್ತದೆ ಎಂದು ಹಾಸನ ವಿಭಾಗದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ವರ್ಷದ ಹಿಂದೆಯೇ ದ.ಕ. ಭಾಗದ ಕುಲ್ಕುಂದ ಗೇಡು ಬಳಿಯಿಂದ ಹಾಸನ ವಿಭಾಗದ ವೀಣಗೋಪುರದ ತನ‌ಕ 22 ಕಿ.ಮೀ. ಮಾರ್ಗದಲ್ಲಿ 20 ಕಿ.ಮೀ. ದೂರದ ತನಕ ಕಾಂಕ್ರೀಟು ಹಾಗೂ ಡಾಮರೀಕರಣ ಮಾಡಿ ಅಭಿವೃದ್ಧಿಗೊಳಿಸಲಾಗಿದೆ. ಈ ಮಾರ್ಗದಲ್ಲಿ 25 ಕಡೆಗಳಲ್ಲಿ ಮೋರಿಗಳನ್ನು ಅಳವಡಿಸಲಾಗಿದೆ.

ಮಳೆಗೆ ಬಂದ್‌
ಮಣ್ಣಿನ ರಸ್ತೆ ನಿಧಾನವಾಗಿ, ಡಾಮರು ಮಾರ್ಗವಾಗಿ ಪರಿವ ರ್ತನೆ ಆಯಿತು. ಸರಕಾರಿ ಬಸ್ಸುಗಳ ಸಂಚಾರ ಆರಂಭವಾಯಿತು. ಐದು ವರ್ಷಗಳಿಂದ ಬೇಸಗೆಯಲ್ಲಿ ಸಕಲೇಶಪುರ ಭಾಗಕ್ಕೆ ಸಾರಿಗೆ ಬಸ್‌ ಸಹಿತ ಖಾಸಗಿ ವಾಹನ ಸಂಚರಿ ಸುತ್ತಿವೆ. ಮಳೆಗಾಲದಲ್ಲಿ ಈ ರಸ್ತೆ ತನ್ನಷ್ಟಕ್ಕೆ ಬಂದ್‌ ಆಗುತ್ತವೆ. ಶಿರಾಡಿ ಹೆದ್ದಾರಿ ಬಂದ್‌ ಆಗಿದ್ದ ವೇಳೆ ಈ ರಸ್ತೆಯೂ ಬಂದ್‌ ಆಗಿತ್ತು.ಈ ಮಧ್ಯೆ ಶ್ರೀ ಚೌಡಮ್ಮನ ಗುಡಿ ಬಳಿ ಸೇತುವೆ ಅಪೂರ್ಣ ಸ್ಥಿತಿಯಲ್ಲಿದ್ದು, ಕಾಮಗಾರಿ ಲೋಪವಾದ ಕುರಿತು ಆರೋಪಗಳು ವ್ಯಕ್ತಗೊಂಡಿವೆ.

ಬಿಸಿಲೆ-ಕುಕ್ಕೆ ನಡುವಿನ ರಸ್ತೆಯ 18 ಕಿ.ಮೀ. ಕಾಂಕ್ರೀಟ್‌ ಆಗಿದ್ದು, ಬೂದಿಚೌಡಿ ಬಳಿ ಸೇತುವೆ ನಿರ್ಮಾಣ ಕಾಮಗಾರಿ ಲೋಪವಾದ ಕುರಿತು ಸಂಶಯಗಳಿವೆ. ಇಲ್ಲಿ ಇಲ್ಲಿ ಸೇತುವೆ ನಿರ್ಮಾಣ ವೇಳೆ ಗುತ್ತಿಗೆದಾರರು ಮಣ್ಣು ತುಂಬಿ ರಸ್ತೆ ಮತ್ತು ಮೋರಿಗೆ ಸಂಪರ್ಕ ಕಲ್ಪಿಸಿದ್ದರು. ಹೀಗಾಗಿ ಚತುಷ್ಪಥ ವಾಹನಗಳು ಇಲ್ಲಿ ಸಂಚರಿಸುವಾಗ ಹೂತು ಹೋಗಿ ತೊಂದರೆ ಆಗುತ್ತಿದ್ದವು. ಈ ಕುರಿತು ವಾಹನ ಸವಾರರು ಆಕ್ಷೇಪವೆತ್ತಿದ್ದರು. ಇಲ್ಲಿ ಆಗುತ್ತಿದ್ದ ತೊಂದರೆ ಮನಗಂಡ ಸಕಲೇಶಪುರ ಹಾಸನ ವಿಭಾಗದ ಅಧಿಕಾರಿಗಳು ರವಿವಾರ ರಾತ್ರಿ ಸ್ಥಳಕ್ಕೆ ಆಗಮಿಸಿ, ಸ್ಥಳದಲ್ಲಿ ಉಂಟಾದ ಲೋಪ ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.

ಶಾಶ್ವತ ಸಂಚಾರಕ್ಕೆ ಒತ್ತಾಯ
ಸುಬ್ರಹ್ಮಣ್ಯದಿಂದ ಸಕಲೇಶಪುರ- ಹಾಸನ, ಬಿಸಿಲೆ, ಶನಿವಾರ ಸಂತೆ, ಹೊಳೆ ನರಸೀಪುರ ಮಾರ್ಗವಾಗಿ ಬೆಂಗಳೂರು, ಸೋಮವಾರ ಪೇಟೆ, ಅರಕಲಗೂಡು, ರಾಮನಾಥಪುರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಿದು. ಈ ರಸ್ತೆ ಮಳೆಗಾಲದಲ್ಲಿ ಬಂದ್‌ ಆಗಿ ಬೇಸಿಗೆಯಲ್ಲಿ ಸಂಚಾರಕ್ಕೆ ಮುಕ್ತವಾಗುತ್ತಿದೆ. ಬಾಕಿ ಇರುವ ರಸ್ತೆಯನ್ನು ಶೀಘ್ರ ಅಭಿವೃದ್ಧಿಗೊಳಿಸಿ ಶಾಶ್ವತ ಸಂಪರ್ಕ ರಸ್ತೆಯನ್ನಾಗಿಸುವಂತೆ ಎರಡೂ ಭಾಗಗಳಿಂದ ಒತ್ತಡಗಳಿವೆ.

Advertisement

ಬ್ರಿಟಿಷರ ಕಾಲದ ರಸ್ತೆ
ಹಳೇ ಮೈಸೂರು ಪ್ರಾಂತದ ಜನರು ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ಬರಲು ಹಾಸನ ಜಿಲ್ಲೆಯ ಬಿಸಿಲೆ ಘಾಟಿ ರಸ್ತೆಯನ್ನು ಅವಲಂಬಿಸುತ್ತಿದ್ದರು. ಟಿಪ್ಪುವಿನ ಕಾಲ ದಲ್ಲೇ ಈ ರಸ್ತೆ ಇತ್ತು ಎನ್ನಲಾಗಿದೆ. ಸುಬ್ರಹ್ಮಣ್ಯ ಕುಲ್ಕುಂದದ ಪ್ರಸಿದ್ಧ ಜಾನುವಾರು ಜಾತ್ರೆಗಾಗಿ ಸಹಸ್ರಾರು ಜಾನುವಾರುಗಳನ್ನು ಈ ರಸ್ತೆ ಮೂಲಕವೇ ತರುತ್ತಿದ್ದರು. ಬಿಸಿಲೆ ಘಾಟಿಯ ಸುಂದರ ಪ್ರಕೃತಿ ಯನ್ನು ಜನತೆ ನೋಡಲೆಂದು ಅರಣ್ಯ ಇಲಾಖೆ ಅಲ್ಲಲ್ಲಿ ವ್ಯೂ ಪಾಯಿಂಟ್‌ಗಳನ್ನು ನಿರ್ಮಿಸಿದೆ. ದ.ಕ.ಜಿಲ್ಲೆಯ ಗಡಿಯಿಂದ ಸ್ವಲ್ಪ ಮುಂದಕ್ಕೆ ಪ್ರಸಿದ್ಧ ಗಡಿ ಚೌಡೇಶ್ವರಿ ಗುಡಿ ಇದೆ. ಬಿಸಿಲೆ-ಶನಿವಾರ ಸಂತೆ-ಹೊಳೆನರಸೀಪುರ ಮೂಲಕ ಬೆಂಗಳೂರಿಗೆ ಪ್ರಯಾಣಿಸಲು ಇದು ಹತ್ತಿರದ ದಾರಿ. ಅರಕಲಗೂಡು ಮಾರ್ಗವಾಗಿ ಪ್ರಸಿದ್ಧ ಪುಣ್ಯಕ್ಷೇತ್ರ ರಾಮನಾಥಪುರ (ಪ್ರಸನ್ನ ಸುಬ್ರಹ್ಮಣ್ಯ ಕ್ಷೇತ್ರ) ಮೂಲಕ ಮೈಸೂರಿಗೆ ಹೋಗಬಹುದು. ಶನಿವಾರ ಸಂತೆ-ಸೋಮವಾರಪೇಟೆ ಕಡೆಯ ಹಲವಾರು ವಿದ್ಯಾರ್ಥಿಗಳು ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next