ನವದೆಹಲಿ: ಉದ್ಯಾನ ನಗರಿ, ಐಟಿ ಹಬ್ ಎಂದು ಖ್ಯಾತಿ ಪಡೆದಿರುವ ಬೆಂಗಳೂರು ವಿಶ್ವ ದಲ್ಲೇ ಅತಿ ಹೆಚ್ಚು ಟ್ರಾಫಿಕ್ ಜಾಮ್ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಮುಂಚೂಣಿ ವಾಹನ ಯಾನ ಸಂಸ್ಥೆಯಾದ ಟೋಮ್ ಟೋಮ್, ಟ್ರಾಫಿಕ್ ಜಾಮ್ ಸೂಚ್ಯಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ವಿಶ್ವದ 57 ದೇಶಗಳ 416 ನಗರದಲ್ಲಿ ಸಮೀಕ್ಷೆ ನಡೆಸಿದ್ದು, ಇದರಲ್ಲಿ ಭಾರತದ 4 ಪ್ರಮುಖ ನಗರಗಳು ಟಾಪ್‌ಟೆನ್ ಪಟ್ಟಿಯಲಿವೆ. ಟ್ರಾಫಿಕ್ ಜಾಮ್‌ನಿಂದ ಭಾರತ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದೆ ಎಂದು ಸಂಸ್ಥೆ ವಿಶ್ಲೇಷಿಸಿದೆ. ಬೆಂಗಳೂರು ಪ್ರಥಮ ಸ್ಥಾನದಲ್ಲಿದ್ದು, ಶೇ.71ರಷ್ಟು ಟ್ರಾಫಿಕ್ ಜಾಮ್ ಹೊಂದಿದೆ. ಇದು ವಿಶ್ವದಲ್ಲೇ ಅತಿ ಜನದಟ್ಟಣೆ ಕೂಡಿರುವ ನಗರವಾಗಿದೆ.
2019ರ ಆಗಸ್ಟ್ 20 ಮಂಗಳವಾರ ಅತಿ ಹೆಚ್ಚು ಟ್ರಾಫಿಕ್ ಜಾಮ್‌ನಿಂದ (ಶೇ.103)ಕೂಡಿರುವ ದಿನವಾಗಿದೆ. 2019ರ ಏಪ್ರಿಲ್ 6 ಶನಿವಾರ (ಶೇ.30) ಅತ್ಯುತ್ತಮ ದಿನವಾಗಿದೆ. ಶುಕ್ರವಾರ ರಾತ್ರಿ 8 ಗಂಟೆ ಬಳಿಕ ಸಂಚರಿಸಿದರೆ ವರ್ಷಕ್ಕೆ ಐದು ಗಂಟೆಯನ್ನು ಉಳಿಸಬಹುದಾಗಿದೆ. ಟ್ರಾಫಿಕ್ ಜಾಮ್‌ನಿಂದ ವರ್ಷಕ್ಕೆ ಸರಾಸರಿ 243 ಗಂಟೆಗಳು (10 ದಿನ, 3 ಗಂಟೆ) ವ್ಯರ್ಥವಾ ಗಲಿವೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಬೆಂಗಳೂರು ನಂತರ ಫಿಲಿಪ್ಪಿನ್ಸ್ ಮನಿಲಾ ನಗರ (ಶೇ. 71 ಟ್ರಾಫಿಕ್ ಜಾಮ್) 2ನೇ ಸ್ಥಾನದಲ್ಲಿದೆ. ಕೊಲಂಬಿಯಾದ ಬೊಗೊಟಾ ನಗರ (ಶೇ.68) 3ನೇ ಸ್ಥಾನದಲ್ಲಿದೆ. ಇನ್ನು ಭಾರತದ ಮುಂಬೈ (ಶೇ.65) 4ನೇ ಸ್ಥಾನ, ಪುಣೆ (ಶೇ.59) 5ನೇ ಸ್ಥಾನ ಹಾಗೂ ನವದೆಹಲಿ (ಶೇ.56) 8ನೇ ಸ್ಥಾನದಲ್ಲಿದೆ. ರಷ್ಯಾದ ಮಾಸ್ಕೋ, ಪೆರು ದೇಶದ ಲಿಮಾ, ಟರ್ಕಿಯ ಇಸ್ತಾನಬುಲ್ ಹಾಗೂ ಇಂಡೋನೇಷ್ಯಾದ ಜಕರ್ತಾ ಟಾಪ್‌ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ವಿಶೇಷ ಎಂದರೆ, ಭಾರತದ ಪ್ರಮುಖ ನಗರಗಳ ಪೈಕಿ ದೆಹಲಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳು ಇದ್ದರೂ ಮೆಟ್ರೋ ಸೇರಿದಂತೆ ರಸ್ತೆಗಳು ಅತ್ಯುತ್ತಮವಾಗಿವೆ. ಅತಿ ಹೆಚ್ಚು ಟ್ರಾಫಿಕ್ ಜಾಮ್, ಅತಿ ಕಡಿಮೆ ಟ್ರಾಫಿಕ್ ಜಾಮ್, ರಸ್ತೆಯಲ್ಲಿ ಚಾಲಕ ಎಷ್ಟು ಸಮಯ ಕಾಲ ಕಾಯುತ್ತಾನೆ, ರಸ್ತೆ ಸಂಪರ್ಕ ಜಾಲ ಮತ್ತಿತರ ಅಂಶಗಳನ್ನಿಟ್ಟುಕೊಂಡು ಈ ಸೂಚ್ಯಂಕ ಸಿದ್ಧಪಡಿಸಲಾಗಿದೆ.
ಟಾಪ್ ಟೆನ್ ನಗರಗಳು, ಟ್ರಾಫಿಕ್ ಜಾಮ್ ಪ್ರಮಾಣ
1.ಬೆಂಗಳೂರು(ಭಾರತ)- ಶೇ.71
2.ಮನಿಲಾ(ಫಿಲಿಪ್ಪಿನ್)-ಶೇ.71
3.ಬೊಗೊಟಾ(ಕೊಲೊಂಬಿಯಾ)-ಶೇ.68
4.ಮುಂಬೈ (ಭಾರತ)-ಶೇ.65
5.ಪುಣೆ (ಭಾರತ)-ಶೇ.59
6.ಮಾಸ್ಕೋ (ರಷ್ಯಾ)-ಶೇ.59
7.ಲಿಮಾ (ಪೆರು)-ಶೇ.57
8.ನವದೆಹಲಿ(ಭಾರತ)-ಶೇ.56
9.ಇಸ್ತಾನಬುಲ್(ಟರ್ಕಿ)-ಶೇ.55
10.ಜಕಾರ್ತ (ಇಂಡೋನೇಷ್ಯಾ)-ಶೇ.53