Advertisement

Bengaluru: ಹನಿಟ್ರ್ಯಾಪ್‌: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ

12:54 PM Nov 23, 2024 | Team Udayavani |

ಬೆಂಗಳೂರು: ಪ್ರೊಫೆಸರ್‌ಗೆ ಹನಿಟ್ರ್ಯಾಪ್‌ ಮಾಡಿ 3 ಕೋಟಿ ರೂ. ವಸೂಲಿ ಮಾಡಿ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದ ಮಹಿಳೆ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Advertisement

ಉಡುಪಿ ಮೂಲದ ತಬಸುಂ ಬೇಗಂ (38), ಕಾರ್ಕಳದ ಅಜೀಂ ಉದ್ದೀನ್‌ (41), ಹಾಗೂ ಅಭಿಷೇಕ್‌ (33) ಬಂಧಿತರು. ಬೆಂಗಳೂರಿನ 46 ವರ್ಷದ ಪ್ರೊಫೆಸರ್‌ ಹನಿಟ್ರ್ಯಾಪ್‌ಗೆ ಒಳಗಾದವರು.

2018ರಲ್ಲಿ ಆರ್‌.ಟಿ. ನಗರದಲ್ಲಿ ಆರೋಪಿ ತಬಸಂ ಬೇಗಂ ಸಹೋದರ ಅಜೀಂ ಉದ್ದೀನ್‌ ಮಾಲಿಕತ್ವದ ಜಿಮ್‌ಗೆ ದೂರುದಾರರು ಸೇರಿಕೊಂಡಿದ್ದರು. ಆ ವೇಳೆ ತಬುಸಂ ಬೇಗಂಳ ಪರಿಚಯವಾಗಿತ್ತು. ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ನಾನು ಹೆಚ್ಚಿನ ವ್ಯಾಸಂಗವನ್ನು ಮಾಡುತ್ತೇನೆ. ಅದಕ್ಕೆ ಹಣಕಾಸಿನ ಸಹಾಯ ಮಾಡುವಂತೆ ದೂರುದಾರರ ಬಳಿ ಆಕೆ ಕೇಳಿಕೊಂಡಳು. ಇದಕ್ಕೆ ದೂರುದಾರ ಪ್ರೊಫೆಸರ್‌ ಸಹಾಯ ಮಾಡುವು ದಾಗಿ ಹೇಳಿದ್ದರು. ನಾನು ತಜೀಮ್‌ ಎಂಬ ಮಗುವನ್ನು ದತ್ತು ಪಡೆದು ಸಾಕುತ್ತಿರುವುದಾಗಿ ತಬಸಂದೂರುದಾರ ಪ್ರೊಫೆಸರ್‌ ಬಳಿ ಹೇಳಿಕೊಂಡಿದ್ದಳು.

2018ರ ಅಕ್ಟೋಬರ್‌ನಲ್ಲಿ ಜಿಮ್‌ಗೆ ಬರುವುದನ್ನು ಬೇಗಂ ನಿಲ್ಲಿಸಿದಳು. ಈ ಬಗ್ಗೆ ಆಕೆಯ ಅಣ್ಣನ ಬಳಿ ದೂರುದಾರರು ವಿಚಾರಿಸಿದಾಗ, ತಬಸಂಳನ್ನು ಆಕೆಯ ಪತಿ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದ. ಆಕೆಗೆ ಮದುವೆಯಾಗಿ ಮಗು ಇರುವ ವಿಷಯ ತಿಳಿದ ದೂರುದಾರರು, ಆತಂಕಗೊಂಡು ತಬಸಂಗೆ ಕರೆ ಮಾಡಿ ವಿಚಾರಿಸಿ ಮದುವೆಯಾಗಿ ಮಗು ಇರುವ ವಿಚಾರವನ್ನು ಮರೆಮಾಚಿರುವ ಬಗ್ಗೆ ಪ್ರಶ್ನಿಸಿದ್ದರು. ಇದರಿಂದಾಗಿ ತಬಸಂ ಆಕ್ರೋಶಗೊಂಡು ಆಕೆಯೊಂದಿಗೆ ಖಾಸಗಿಯಾಗಿ ಇರುವ ಪೋಟೋ ಮತ್ತು ವಿಡಿಯೋಗಳನ್ನು ದೂರುದಾರರಿಗೆ ಕಳುಹಿಸಿ ಇವುಗಳನ್ನು ನಿನ್ನ ಕಚೇರಿಗೆ ಹಾಗೂ ಕುಟುಂಬಸ್ಥರಿಗೆ ಹಂಚಿ ನಿನ್ನ ಮರ್ಯಾದೆ ತೆಗೆಯುತ್ತೇನೆ ಎಂದು ಹೆದರಿಸಿದ್ದಳು. ನಂತರ ಹಣಕ್ಕೆ ಬೇಡಿಕೆ ಇಟ್ಟು ಬ್ಲಾಕ್‌ ಮೇಲ್‌ ಮಾಡಿದ್ದಳು.

ಇನ್ನು 2019ರಲ್ಲಿ ಆಕೆಯ ಸಹೋದರ ಅಜೀಂ ದೂರುದಾರರಿಂದ ಇದೇ ವಿಚಾರಕ್ಕೆ ಹಣ ಪಡೆದಿದ್ದ. ಈ ನಡುವೆ ಪೊಲೀಸ್‌ ಸೋಗಿನಲ್ಲಿ ಆರೋಪಿ ಅಭಿಷೇಕ್‌, ತಬಸಂಪರವಾಗಿ ಆಕೆ ಕೇಳುವಷ್ಟು ಹಣ ಕೊಡದಿದ್ದರೆ ಜೈಲಿಗೆ ಕಳುಹಿಸುವುದಾಗಿ ಬೆದರಿಸಿದ್ದ. ಆತಂಕಗೊಂಡ ದೂರುದಾರರು ಸಾಲಗಳನ್ನು ಮಾಡಿ ಹಂತ ಹಂತವಾಗಿ 3 ಕೋಟಿ ರೂ. ನೀಡಿದ್ದರು. ಪಡೆದಿರುವ ಸಾಲಕ್ಕೆ ಪ್ರತಿ ತಿಂಗಳು 1.25 ಲಕ್ಷ ಇಎಂಐ ಕಟ್ಟುತ್ತಿದ್ದಾರೆ. ಆರೋಪಿಗಳು ಮತ್ತೆ ಹಣಕ್ಕೆ ಬೇಡಿಕೆಯಿಟ್ಟಾಗ ದೂರುದಾರರು ಸಿಸಿಬಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು.

Advertisement

ಪ್ರೊಫೆಸರ್‌ ಖೆಡ್ಡಾಕ್ಕೆ ಬಿದ್ದಿದ್ದು ಹೇಗೆ?

 ಜಿಮ್‌ ನಡೆಸುತ್ತಿದ್ದ ಮಹಿಳೆಯ ಸಹೋದರ. ಇದೇ ಜಿಮ್‌ಗೆ ಪ್ರತಿದಿನ ಬರುತ್ತಿದ್ದ ಪ್ರೊಫೆಸರ್‌

 ಈ ವೇಳೆ ಮಹಿಳೆ ತಬಸಂ, ಪ್ರೊಫೆಸರ್‌ ಪರಿಚಯ

 ಆತ್ಮೀಯತೆ ಬೆಳೆಸಿಕೊಂಡು ಖಾಸಗಿ ವಿಡಿಯೋ ಮಾಡಿದ್ದ ಮಹಿಳೆ

 ವಿಡಿಯೋ, ಫೋಟೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ವಂಚನೆ

Advertisement

Udayavani is now on Telegram. Click here to join our channel and stay updated with the latest news.

Next