ಬೆಂಗಳೂರು: ಬಹುನಿರೀಕ್ಷಿತ ಬೆಂಗಳೂರಿನ ಕೇಕ್ ಶೋ ಅರಮನೆ ಮೈದಾನ ತ್ರಿಪುರವಾಸಿನಿಯಲ್ಲಿ ಗುರುವಾರದಿಂದ ಜನವರಿ 1ರ ವರೆಗೆ ನಡೆಯ ಲಿದ್ದು, ಡೈನೋಸಾರ್ ವರ್ಲ್ಡ್, ರಟಾಟೂಲ್ ಪಾಕಶಾಲೆಯ ಈ ಬಾರಿ ಕೇಕ್ ಶೋ ಪ್ರಮುಖ ಆಕರ್ಷಣೆಯಾಗಿದೆ.
ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಮತ್ತು ಕೇಕ್ ಆರ್ಟ್ಸ್, ಮೈ ಬೇಕ್ ಮಾರ್ಟ್ ಸಂಸ್ಥೆ ಜಂಟಿಯಾಗಿ ಸುವರ್ಣ ಮಹೋತ್ಸವದ ಅಂಗವಾಗಿ “ಎ ಸೆಲೆಬ್ರೇಷನ್ ಆಫ್ ಆರ್ಟ್’ ಥೀಮ್ನಲ್ಲಿ ಕೇಕ್ ಶೋ ಆಯೋಜಿಸಿದೆ. ಸುಮಾರು 20 ಕೇಕ್ ಕಲಾಕೃತಿಗಳಿದ್ದು, ನೋಡುಗರನ್ನು ಕೇಕ್ ಲೋಕಕ್ಕೆ ಕರೆದುಕೊಂಡು ಹೋಗಲಿದೆ. ಇವುಗಳನ್ನು ಅತ್ಯಂತ ಅದ್ಭುತವಾಗಿ ಕೇಕ್ ಹಾಗೂ ಸಕ್ಕರೆ ಪಾಕದ ಮಿಶ್ರಣದಿಂದ ತಯಾರಿಸಲಾಗಿದೆ. ಪ್ರತಿ ದಿನ ಬೆಳಗ್ಗೆ 10ರಿಂದ ಸಂಜೆ 9ರ ವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ದಿ ಎನ್ಚ್ಯಾಂಟೆಡ್ ಕ್ರಿಸ್ಮಸ್ ಟ್ರೀ: ಸುಮಾರು 20 ಅಡಿಗಿಂತ ಎತ್ತರದ 2.8 ಟನ್ ತೂಕದ ಕೇಕ್ ಕ್ರಿಸ್ಮಸ್ ಟ್ರೀ ನಿರ್ಮಿಸಲಾಗಿದೆ. ವಿಶೇಷ ಪ್ರವಾಸಿ ಮೆರಗು ನೀಡಲು ಆಟಿಕೆ ರೈಲುಗಳನ್ನು ಆಳವಡಿಸಲಾಗಿದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುವ ಆಟಿಕೆ ರೈಲುಗಳು, ಕ್ರಿಸ್ಮಸ್ ಗೋದಲಿ ಕ್ರಿಸ್ಮಸ್ ಟ್ರೀ ಮೆರಗು ಹೆಚ್ಚಿಸುತ್ತಿದೆ. ಸುಮಾರು 11 ಮಂದಿ ತಂಡ ಸತತ 60 ದಿನಗಳ ನಿರಂತರ ಪರಿಶ್ರಮದಿಂದ ದಿ ಎನ್ ಚ್ಯಾಂಟೆಡ್ ಕ್ರಿಸ್ಮಸ್ ಟ್ರೀ ತಯಾರಿಸಲಾಗಿದೆ.
ಕೇಕ್ ಶೋನಲ್ಲಿ ಡೈನೋಸಾರ್ ಜಗತ್ತು ಬಹಳ ಅದ್ಭುತ ವಾಗಿ ಮೂಡಿ ಬಂದಿದೆ. ಸಕ್ಕರೆ ಪಾಕದಿಂದ ಮೂಡಿ ಬಂದ ಡೈನೋಸಾರ್ಗಳು, ಜ್ವಾಲಾಮುಖೀ ಭೂ ಪ್ರದೇಶಗಳು ಮತ್ತು ಹಚ್ಚ ಹಸಿರಿ ನಿಂದ ಕೂಡಿದ ಡೈನೋಸಾರ್ ವರ್ಲ್ಡ್ ಪ್ರೇಕ್ಷಕರನ್ನು ಡೈನೋಸಾರ್ ಲೋಕಕ್ಕೆ ಕರೆದ್ಯೊಯುತ್ತಿದೆ. ಸಕ್ಕರೆ ಯಿಂದ ನಿರ್ಮಿಸಲಾದ ಗಾಜಿನ ಮನೆಯ ಉದ್ಯಾನ ದಿಂದ ಹಿಡಿದು ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪರಂಪರೆ ಸೇರಿ ದಂತೆ ಇತರೆ ಕಲಾಕೃತಿ ಕೇಕ್ನಲ್ಲಿ ಮೂಡಿ ಬಂದಿದೆ.
ಆಕರ್ಷಕ ಅಯೋಧ್ಯೆ ರಾಮಮಂದಿರ! ಈ ಬಾರಿ ವಿಶೇಷವಾಗಿ ಕೇಕ್ನಲ್ಲಿ ರಾಮಮಂದಿರವನ್ನು ನಿರ್ಮಿಸಲಾಗಿದೆ. ಅಯೋಧ್ಯೆಯ ದೇವಾಲಯದ ವಾಸ್ತುಶಿಲ್ಪದ ಮಾದರಿಯಲ್ಲಿ ಸಕ್ಕರೆ ಪಾಕದಿಂದ ರಾಮಮಂದಿರದ ಕೇಕ್ ತಯಾರಿಸಲಾಗಿದೆ. ಸುಮಾರು 860 ಕೆ.ಜಿ. ತೂಕವಿರುವ ರಾಮಮಂದಿರದ ಕಲಾಕೃತಿ ನೋಡುಗರ ಗಮನ ಸೆಳೆಯುತ್ತಿದೆ. ಸಕ್ಕರೆ ಪಾಕದಿಂದ ಸಿಂಹ, ಆನೆಗಳು, ಹನುಮಂತನ ಒಳಗೊಂಡ ಕಲಾಕೃತಿಗಳು ಮುಖ್ಯ ಆಕರ್ಷಣೆಯಾಗಿದೆ.