Advertisement

Bengaluru: ಜೋಡಿ ಕೊಲೆ ಕೇಸ್‌: ನೇಪಾಳದ ಇಬ್ಬರ ಬಂಧನ

03:11 PM Dec 13, 2024 | Team Udayavani |

ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ನಡೆದ ಜೋಡಿ ಕೊಲೆ ಪ್ರಕರಣ ಬೇಧಿಸಿರುವ ಯಲಹಂಕ ನ್ಯೂಟೌನ್‌ ಠಾಣೆ ಪೊಲೀಸರು ನೇಪಾಳ ಮೂಲದ ಇಬ್ಬರು ಆರೋಪಿ ಗಳನ್ನು ಬಂಧಿಸಿದ್ದಾರೆ. ನೇಪಾಳ ಮೂಲದ ಸಂಗಮ್‌ (26) ಮತ್ತು ಸಮೀರ್‌ (26) ಬಂಧಿತರು.

Advertisement

ಆರೋಪಿಗಳು ಡಿ.8ರಂದು ತಡ ರಾತ್ರಿ ನೇಪಾಳ ಮೂಲದ ಬಿಕ್ರಂ ಬಿಸ್ವಜಿತ್‌ (24) ಮತ್ತು ಬಿಹಾರ ಮೂಲದ ಚೋಟು ತೂರಿ(33) ಎಂಬವರನ್ನು ಕಲ್ಲು ಹಾಗೂ ಕಬ್ಬಿಣ ರಾಡ್‌ಗಳು ಹಾಗೂ ಟೈಲ್ಸ್‌ ಪೀಸ್‌ ಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಯುವತಿ ವಿಚಾರಕ್ಕೆ ಕೃತ್ಯ ನಡೆದಿದೆ ಎಂಬುದು ಗೊತ್ತಾಗಿದೆ.

ಬಿಕ್ರಂ ಮತ್ತು ಆರೋಪಿಗಳು ಹಾಗೂ ಯುವತಿ ನೇಪಾಳ ಮೂಲದವರಾಗಿದ್ದು, 3 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಆರೋಪಿಗಳಿಬ್ಬರು ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್‌ ಕೆಲಸ ಮಾಡಿಕೊಂಡಿದ್ದರು. ಬಿಕ್ರಂ ಕೂಡ ಮುಚ್ಚಿದ್ದ ಎಲೆಕ್ಟ್ರಿಕಲ್‌ ಕಾರ್ಖಾನೆಯೊಂದರ ಸೆಕ್ಯುರಿಟಿ ಗಾರ್ಡ್‌ ಆಗಿದ್ದ. ಯುವತಿ ಕೂಡ ನಗರದಲ್ಲಿ ಕಾರ್ಖಾನೆಯೊಂದರಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದಾಳೆ. ಈ ಮಧ್ಯೆ ಸಂಗಮ್‌ ಪ್ರೀತಿಸುತ್ತಿದ್ದ ಯುವತಿಗೆ ಬಿಕ್ರಂ ಅಶ್ಲೀಲವಾಗಿ ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸುತ್ತಿದ್ದ. ಜತೆಗೆ ವಿಡಿಯೋ ಕರೆ ಮಾಡಿ ತೊಂದರೆ ಕೊಡುತ್ತಿದ್ದ. ಈ ವಿಚಾರವನ್ನು ಯುವತಿ ಪ್ರಿಯಕರ ಸಂಗಮ್‌ಗೆ ತಿಳಿಸಿದ್ದಳು. ಅದರಿಂದ ಕೋಪಗೊಂಡಿದ್ದ ಸಂಗಮ್‌, ಒಂದೆರಡು ಬಾರಿ ಬಿಕ್ರಂಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದನು. ಆದರೂ ಬಿಕ್ರಂ, ಯುವತಿಗೆ ತೊಂದರೆ ಮುಂದುವರಿಸಿದ್ದ.

ಪಾರ್ಟಿ ಮಾಡುವಾಗಲೇ ಹತ್ಯೆ: ಈ ನಡುವೆ ಭಾನುವಾರ ಎಲೆಕ್ಟ್ರಿಕಲ್‌ ಕಾರ್ಖಾನೆ ಆವರಣದಲ್ಲೇ ಬಿಕ್ರಂ ಮತ್ತು ಗಾರ್ಮೆಂಟ್ಸ್‌ವೊಂದರ ವಾಹನ ಚಾಲಕ ಚೋಟು ಮದ್ಯದ ಪಾರ್ಟಿ ಮಾಡುತ್ತಿದ್ದರು. ಅದೇ ವೇಳೆ ಸ್ಥಳಕ್ಕೆ ಬಂದ ಆರೋಪಿಗಳು, ಕೆಲ ಹೊತ್ತು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಬಳಿಕ ಆರೋಪಿ ಸಂಗಮ್‌, ತನ್ನ ಪ್ರೇಯಸಿಗೆ ಕರೆ ಮಾಡುವ ವಿಚಾರ ಪ್ರಸ್ತಾಪಿಸಿ ಬಿಕ್ರಂ ಜತೆ ಗಲಾಟೆ ಮಾಡಿದ್ದಾನೆ. ಅದು ವಿಕೋಪಕ್ಕೆ ಹೋದಾಗ, ಆರೋಪಿಗಳಿಬ್ಬರು ಕಬ್ಬಿಣದ ರಾಡ್‌ ಮತ್ತು ಟೈಲ್ಸ್‌ಗಳಿಂದ ಹೊಡೆದು ಬಿಕ್ರಂ ಹತ್ಯೆಗೈದಿದ್ದರು ಎಂದು ಪೊಲೀಸರು ಹೇಳಿದರು.

ಅಮಾಯಕನ ಹತ್ಯೆ: ಇನ್ನು ಸ್ನೇಹಿತನ ಕೋರಿಗೆ ಮೇರೆಗೆ ಮದ್ಯದ ಪಾರ್ಟಿಗೆ ಹೋಗಿದ್ದ ಚೋಟು ತೂರಿಗೆ ಗಲಾಟೆ ಯಾವ ವಿಚಾರಕ್ಕೆ ನಡೆಯುತ್ತಿದೆ ಎಂಬುದು ಗೊತ್ತಿಲ್ಲ. ಆದರೆ, ಬಿಕ್ರಂ ಮೇಲೆ ಹಲ್ಲೆ ನಡೆಯುವಾಗ ತಡೆಯಲು ಮಧ್ಯಪ್ರವೇಶಿಸಿದ್ದಾನೆ. ಆಗ ಆರೋಪಿಗಳು, ಈತನನ್ನು ಬಿಟ್ಟರೆ ಪೊಲೀಸರಿಗೆ ಮಾಹಿತಿ ನೀಡುತ್ತಾನೆ ಎಂದು ಭಾವಿಸಿ ಆತನನ್ನು ಹತ್ಯೆಗೈದಿದ್ದರು. ಚೋಟು ತೂರಿ ಅಮಾಯಕ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next