Advertisement

ಕೆಲಸ ಕೊಡಿಸುವುದಾಗಿ 26 ಯುವತಿಯರಿಗೆ 21.30 ಲಕ್ಷ ರೂ. ಪಂಗನಾಮ ಹಾಕಿದ ಕಿಲಾಡಿ ಅಂದರ್

02:51 PM Jan 10, 2022 | Team Udayavani |

ಬೆಂಗಳೂರು : ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನಲ್ಲಿ ಪ್ರೊಫೈಲ್‌ ಹಾಕಿ, ಪರಿಚಯವಾದ ಹೆಣ್ಣು ಮಕ್ಕಳಿಗೆ ಮದುವೆಯಾಗುವುದಾಗಿ ಹಾಗೂ ಹೆಸ್ಕಾಂನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿಯನ್ನು ಆಗ್ನೇಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆ ಮೂಲದ ಜೈ ಭೀಮ್‌ ವಿಠಲ್‌ ಪಡುಕೋಟೆ (33) ಬಂಧಿತ ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಮೊಬೈಲ್‌, ಕಾರು ಹಾಗೂ ಸುಮಾರು 26 ಮಂದಿ ಹೆಣ್ಣು ಮಕ್ಕಳು, ಅವರ ಸಂಬಂಧಿಕರಿಂದ ವಸೂಲಿ ಮಾಡಿದ 1,66,694 ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

ಆರೋಪಿ ಜೈ ಭೀಮ್‌ ವಿಠಲ್‌ ಪಡುಕೋಟೆ ತಂದೆ ಈ ಹಿಂದೆ ಹೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳ ಹಿಂದೆ ಮೃತಪಟ್ಟಿದ್ದರು. ಈ ಅನುಕಂಪದ ಆಧಾರದ ಮೇಲೆ ಈತನಿಗೆ ಲೈನ್‌ ಮ್ಯಾನ್‌ ಕೆಲಸ ಕೊಡಲಾಗಿತ್ತು. 8 ತಿಂಗಳು ಕಾರ್ಯನಿರ್ವಹಿಸಿದ್ದ.  ಈ ಮಧ್ಯೆ 2013ರಲ್ಲಿ ಮುದ್ದೇಬಿಹಾಳದ ಸುನಿತಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಈತ, ಕ್ಷುಲ್ಲಕ ಕಾರಣಕ್ಕೆ ಆಕೆಯನ್ನು ಕೊಂದು ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದ. ನಂತರ ಯಾವುದೇ ಕೆಲಸ ಸಿಗದಿದ್ದರಿಂದ ಜೀವನ ನಿರ್ವಹಣೆಗೆ ಹಣ ಗಳಿಸಲು, ಜೀವನ್‌ ಸಾಥಿ, ಭಾರತ್‌ ಮ್ಯಾಟ್ರಿಮೋನಿ, ಶಾದಿ.ಕಾಂ, ಕಮ್ಯುನಿಟಿ ಮ್ಯಾಟ್ರಿಮೋನಿ.ಕಾಂ. ಕನ್ನಡ ಮ್ಯಾಟ್ರಿಮೋನಿ.ಕಾಂ ಸೇರಿ ಇನ್ನಿತರ ಆನ್‌ಲೈನ್‌ ವಿವಾಹ ವೇದಿಕೆಗಳಲ್ಲಿ ನಕಲಿ ಖಾತೆ ಸೃಷ್ಟಿಸಿ, ತಾನು ಹುಬ್ಬಳ್ಳಿಯ ಹೆಸ್ಕಾಂ ಕಚೇರಿಯಲ್ಲಿ ಸೆಕ್ಷನ್‌ ಅಧಿಕಾರಿಯಾಗಿದ್ದೇನೆ ಎಂದು ನಕಲಿ ಪ್ರೊಫೈಲ್‌ ಸೃಷ್ಟಿಸಿದ್ದ ಎಂದು ಪೊಲೀಸರು ಹೇಳಿದರು.

ಈ ವೇದಿಕೆಯಲ್ಲಿ ವರನನ್ನು ಹುಡುಕುತ್ತಿರುವ ಯುವತಿಯರಿಗೆ ನಿಮ್ಮ ಪ್ರೊಫೈಲ್‌ ಇಷ್ಟವಾಗಿದೆ ಎಂದು ಸಂದೇಶ ಕಳುಹಿಸುತ್ತಿದ್ದ. ಅಲ್ಲದೆ, ಅವರ ಕುಟುಂಬದ ಬಗ್ಗೆ ಮಾಹಿತಿ ಪಡೆದುಕೊಂಡು ಹುಡುಗಿ ನೋಡಲು ಬರುವುದಾಗಿ ಹೇಳ್ಳುತ್ತಿದ್ದ. ಆರೋಪಿಯ ಮಾತಿನ ಮೋಡಿಗೆ ಮರುಳಾಗಿ ಯುವತಿಯರು ಈತನ ಮಾತನ್ನು ನಂಬುತ್ತಿದ್ದರು. ಬಳಿಕ ಯುವತಿಯರೊಂದಿಗೆ ಸಲುಗೆಯಿಂದ ಮಾತನಾಡಿ ತಾನು ಹೆಸ್ಕಾಂನಲ್ಲಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ಪರಿಚಯವಿದೆ. ಅಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿದ್ದು, ನಿಮ್ಮ ಪರಿಚಿತರಿಗೆ ಬೇಕಾದರೆ ಇಲ್ಲಿ ಕೆಲಸ ಕೊಡಿಸುತ್ತೇನೆ. ಸ್ವಲ್ಪ ಹಣ ಖರ್ಚು ಮಾಡಬೇಕಾಗುತ್ತದೆ ಎಂದು ಹೇಳುತ್ತಿದ್ದ. ಆತನ ಮಾತು ನಂಬುತ್ತಿದ್ದ ಯುವತಿಯರು ಸಂಬಂಧಿಕರಿಗೆ ಕೆಲಸ ಬೇಕು ಎಂದು ಕೇಳಿದಾಗ, ಅವರ ಹೆಸರಿನಲ್ಲಿ ಈಗಾಗಲೇ 10 ಸಾವಿರ ರೂ. ಲಂಚ ಕೊಟ್ಟಿದ್ದೇನೆ. ಇನ್ನೂ 1 ರಿಂದ 2 ಲಕ್ಷ ರೂ. ಕೊಟ್ಟರೆ ಕೆಲಸ ಸಿಗುತ್ತದೆ ಎಂದು ನಂಬಿಸಿ ಆನ್‌ಲೈನ್‌ ಮೂಲಕ ಹಣ ಪಡೆದುಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ :ರೌಡಿಶೀಟರ್‌ಗಳ ಚಿತ್ರ-ವಿಚಿತ್ರ ನಾಮಧೇಯ : ಸಹಚರರಿಂದಲೇ ರೌಡಿಗಳಿಗೆ ನಿಕ್‌ನೇಮ್‌

ಯುವತಿಯರ ಜತೆ ಸಂಪರ್ಕ: ವಿವಾಹವಾಗುವುದಾಗಿ ನಂಬಿಸಿ 3 ಯುವತಿಯರ ಜತೆಗೆ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದಾನೆ. ಇದುವರೆಗೆ ಶಿವಮೊಗ್ಗ, ಹಾವೇರಿ, ಬೆಂಗಳೂರು, ಮೈಸೂರು, ಧಾರವಾಡ, ಹುಬ್ಬಳ್ಳಿ, ಯಾದಗಿರಿ, ರಾಯಚೂರು ಮೂಲದ ಒಟ್ಟು 26 ಯುವತಿಯರಿಂದ ಒಟ್ಟು 21.30 ಲಕ್ಷ ರೂ. ಪಡೆದು ವಂಚಿಸಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಸೆನ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

Advertisement

ಪೊಲೀಸರಿಗೆ ವಂಚಿಸಿ ಸಿಕ್ಕಿಬಿದ್ದ!

ಇತ್ತೀಚೆಗೆ ಬೆಂಗಳೂರು ಪೊಲೀಸ್‌ ಇಲಾಖೆಯ ಮಹಿಳಾ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಯುವತಿ ವಿವಾಹವಾಗಲು ಮ್ಯಾಟ್ರಿಮೋನಿ ವೆಬ್‌ ಸೈಟ್‌ನಲ್ಲಿ ವರನನ್ನು ಹುಡುಕುತ್ತಿದ್ದರು. ಈ ವೇಳೆ ಆರೋಪಿ ರಿಕ್ವೆಸ್ಟ್‌ ಕಳುಹಿಸಿ, ಬಳಿಕ ಸಂದೇಶ ಕಳುಹಿಸಿದ್ದ. ವಿವಾಹವಾಗುವುದಾಗಿಯೂ ತಿಳಿಸಿದ್ದ. ಆದರೆ, ಆತನ ಸಂದೇಶಗಳು ಮತ್ತು ಮಾತಿನ ಧಾಟಿಯಿಂದ ಅನುಮಾನಗೊಂಡು ಹಿರಿಯ ಅಧಿಕಾರಿಗಳಿಗೆ ತಿಳಿಸಿದಾಗ ಆತನ  ಹಿನ್ನೆಲೆ ಪರಿಶೀಲಿಸಿದಾಗ ಕೊಲೆಗೈದು ಜೈಲು ಸೇರಿರುವುದು ಗೊತ್ತಾಗಿದೆ. ನಂತರ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ :  ಹುಣಸೂರು: ಜನರ ಕಲ್ಲೇಟಿಗೆ ಸಿಲುಕಿ ನಾಲೆಯಲ್ಲಿ ಪರದಾಡಿದ ಕಾಡಾನೆಗಳು

 

Advertisement

Udayavani is now on Telegram. Click here to join our channel and stay updated with the latest news.

Next