Advertisement

ತನ್ನ ಸಹಚರನನ್ನು ಜೈಲಿನಿಂದ ಬಿಡಿಸಲು ಹೋಗಿ ತಾವೇ ಪೊಲೀಸರ ಖೆಡ್ಡಾಕ್ಕೆ ಬಿದ್ದರು

12:12 PM Jan 20, 2022 | Team Udayavani |

ಬೆಂಗಳೂರು: ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಪೊಲೀಸರ ವಶದಲ್ಲಿರುವ ರೌಡಿ ಸ್ಟಾರ್‌ ರಾಹುಲ್‌ನನ್ನು ಬಿಡಿಸಿಕೊಳ್ಳಲು ಹಣಕ್ಕಾಗಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆತನ ನಾಲ್ವರು ಸಹಚರರನ್ನು ವಿವಿಪುರಂ ಪೋಲಿಸರು ಖೆಡ್ಡಾಕ್ಕೆ ಕೆಡವಿದ್ದಾರೆ.

Advertisement

ನ್ಯೂ ಟಿಂಬರ್‌ಯಾರ್ಡ್‌ ಲೇಔಟ್‌ನ ಪುರುಷೋತ್ತಮ್‌(26), ಶ್ರೀನಗರದ ಕಿರಣ್‌ (21), ಕಾಟನ್‌ಪೇಟೆ ಮುಖ್ಯರಸ್ತೆಯ ಕಾರ್ತಿಕ್‌  (21) ಮತ್ತು ರಾಹುಲ್‌(28) ಬಂಧಿತರು. ಬಂಧಿತರಿಂದ 6 ಲಕ್ಷ ರೂ. ಬೆಲೆಯ 20 ಕೆಜಿ 600 ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ್ದ ಹೊಂಡಾ ಸಿಟಿ ಕಾರು, ಮಚ್ಚು, ಹಣ, ಮೊಬೈಲ್‌ ಗಳನ್ನು ವಶಪಡಿಸಿ ಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಭಾಗಿ ಆಗಿರುವ ಕುಳ್ಳ ರಿಜ್ವಾನ್‌, ಭರತ್‌ ಮತ್ತು ಆಟೋ ವಿಜಿ ನಾಪತ್ತೆಯಾಗಿದ್ದು ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಈ ಹಿಂದೆ ಕೊಲೆಯತ್ನ, ಹಲ್ಲೆ, ಇತ್ಯಾದಿ ಅಪರಾಧಗಳಲ್ಲಿ ಭಾಗಿಯಾಗಿರುವ ಕುಳ್ಳ ರಿಜ್ವಾನ್‌, ಸ್ಟಾರ್‌ ರಾಹುಲ್‌, ಭರತ ಸಹಚರರು. ಇವರೆಲ್ಲ ಮಾದಕವಸ್ತು ಗಾಂಜಾವನ್ನು ಖರೀದಿ ಮಾಡಿಕೊಂಡು ಬಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.

ಈ ಹಿಂದೆ ಹನುಮಂತನಗರ ಪೊಲೀಸ್‌ ಠಾಣೆ ವ್ಯಾಪ್ತಿಗಳಲ್ಲಿ ಕಾರುಗಳ ಗಾಜು ಒಡೆದು ದಾಂಧಲೆ ಮಾಡಿದ್ದ ಪ್ರಕರಣದಲ್ಲಿ ರೌಡಿ ಸ್ಟಾರ್‌ ರಾಹುಲ್‌ ವಿರುದ್ಧ ಪ್ರಕರಣ ದಾಖಲಾಗಿತ್ತು.
ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಈತನ ವಿರುದ್ಧ ವಾರೆಂಟ್‌ಗಳು ಇದುದ್ದರಿಂದ ಪೊಲೀಸರು ಹುಡುಕಾಡುತ್ತಿದ್ದರು. ಆ ಹಿನ್ನೆಲೆ ಜ.17ರಂದು ಸ್ಟಾರ್‌ ರಾಹುಲ್‌ನನ್ನು ಬಂಧಿಸಿದ್ದರು.

Advertisement

ಸ್ಟಾರ್‌ ರಾಹುಲ್‌ ಪೊಲೀಸರಿಗೆ ಸಿಕ್ಕಿಬಿದ್ದಿರುವ ವಿಷಯ ತಿಳಿದು ನಾಲ್ವರು ಸಹಚರರು ಹಾಗೂ ತಲೆಮರೆಸಿಕೊಂಡಿರುವ ಮೂವರು ಒಟ್ಟಾಗಿ ಸೇರಿ ರಾಹುಲ್‌ನನ್ನು ಬಿಡಿಸಿಕೊಳ್ಳುವ ಸಂಬಂಧ ಹಣದ ಅವಶ್ಯಕತೆ ಇದ್ದುದರಿಂದ ಗಾಂಜಾ ಮಾರಾಟ ಮಾಡಿ ಹಣ ಹೊಂದಿಸುವ ಯೋಜನೆ ರೂಪಿಸಿದ್ದರು ಎಂಬುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮತ್ತಷ್ಟು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಪೊಲೀಸ್‌ ಇನ್ಸ್‌ಪೆಕ್ಟರ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಆಯುಕ್ತರಿಗೆ ದೂರು ನೀಡಿದ ಮಹಿಳೆ

ಹಳೆ ಕೋಟೆ ಮೈದಾನದಲ್ಲಿ ಖೆಡ್ಡಾಕ್ಕೆ ಬಿದ್ದರು: ಮಂಗಳವಾರ ಮಧ್ಯಾಹ್ನ 1ಗಂಟೆ ಸುಮಾರಿನಲ್ಲಿ ಭರತನ ಹೋಂಡಾ ಸಿಟಿ ಕಾರಿನ ಡಿಕ್ಕಿಯಲ್ಲಿ ಗಾಂಜಾ ಮತ್ತು ಮಾರಕಾಸ್ತ್ರಗಳನ್ನು
ಇಟ್ಟುಕೊಂಡು ವಿವಿಪುರಂ ಠಾಣೆ ವ್ಯಾಪ್ತಿಯ ಹಳೇಕೋಟೆ ಮೈದಾನದ ಎದುರಿನ ಕೆ.ಆರ್‌. ರಸ್ತೆಯಲ್ಲಿ ಕುಳ್ಳ ರಿಜ್ವಾನ್‌, ಭರತ್‌ ಮತ್ತು ಆಟೋ ವಿಜಿ ಬರುವಿಕೆಗಾಗಿ ಕಾಯುತ್ತಿದ್ದರು.
ಈ ವಿಷಯ ತಿಳಿಯುತ್ತಿದ್ದಂತೆ ದಕ್ಷಿಣ ವಿಭಾಗದ ಡಿಸಿಪಿ ಹರೀಶ್‌ ಪಾಂಡೆ ಜಯನಗರ ಉಪವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಶ್ರೀನಿವಾಸ್‌ ಉಸ್ತುವಾರಿಯಲ್ಲಿ ವಿವಿಪುರಂ ಠಾಣೆ
ಇನ್‌ಸ್ಪೆಕ್ಟರ್‌ ಕಿರಣ್‌ಕುಮಾರ್‌ ಎಸ್‌.ನೀಲಗಾರ್‌, ಪಿಎಸ್‌ಐ ಮಂಜುನಾಥ್‌ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರಿನ ಸಮೇತ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊರಿಯರ್‌ ವಾಹನ ಚಾಲಕ: ಈಗಾಗಲೇ ಹನುಮಂತ ನಗರ ಪೊಲೀಸರಿಂದ ಬಂಧಿತನಾಗಿರುವ ಪುರುಷೋತ್ತಮ್‌ ಅಲಿಯಾಸ್‌ ಮಂಜು ಹತ್ತನೇ ತರಗತಿ ವ್ಯಾಸಂಗ ಮಾಡಿ, ಶಾಲೆ ಬಿಟ್ಟು ಚಾಲಕ ವೃತ್ತಿ ಮಾಡಿಕೊಂಡಿದ್ದ. ನೆಲಮಂಗಲ ಹತ್ತಿರದ ಎಸ್‌ ಎಸ್‌ಟಿ ಕಾರ್ಗೋ ಮೂವರ್ಸ್‌ನಲ್ಲಿ ಕೊರಿಯರ್‌ ವಾಹನದ ಚಾಲನೆ ಮಾಡಿಕೊಂಡಿದ್ದ. ಈತ ಅಪರಾಧ ಹಿನ್ನೆಲೆಯುಳ್ಳ
ಭರತ, ರಾಹುಲ್‌ ಮತ್ತು ಕುಳ್ಳ ರಿಜ್ವಾನ್‌ ಸ್ನೇಹ ಬೆಳೆಸಿಕೊಂಡು ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ.

ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ
ಆರೋಪಿ ಕಿರಣ್‌ ಬೇಕರಿಗಳಲ್ಲಿ ಕೆಲಸ ಮಾಡಿಕೊಂಡಿದ್ದು, ಈತನೂ ಸಹ ಭರತ, ಕುಳ್ಳ ರಿಜ್ವಾನ್‌, ಆಟೋ ವಿಜಿ ಸ್ನೇಹ ಬೆಳೆಸಿಕೊಂಡು ಹಣಕ್ಕಾಗಿ ಮತ್ತು ದಿನನಿತ್ಯದ ದುಶ್ಚಟಗಳಿಗೆ ಗಾಂಜಾ
ಮಾರಾಟದಲ್ಲಿ ತೊಡಗಿರುವುದು ಪೋಲಿಸರ ವಿಚಾರಣೆ ವೇಳೆ ತಿಳಿದು ಬಂದಿದೆ. ಮತ್ತೂಬ್ಬ ಆರೋಪಿ ಕಾರ್ತಿಕ್‌ ವಿವಿಧ ಬೇಕರಿಗಳಲ್ಲಿ ಕೆಲಸ ಮಾಡಿ ಕೊಂಡಿದ್ದು, ಈತನೂ ಸಹ ಅಪರಾಧ ಹಿನ್ನೆಲೆಯುಳ್ಳವರ ಸ್ನೇಹ ಬೆಳೆಸಿ ಕೊಂಡು ದುಶ್ಚಟಗಳಿಗಾಗಿ ಗಾಂಜಾ ಮಾರಾಟದಲ್ಲಿ ತೊಡಗಿಕೊಂಡಿದ್ದ. ಆರೋಪಿ ರಾಹುಲ್‌ ಈ ಹಿಂದೆ ಕೆ.ಆರ್‌.ರಸ್ತೆಯ ಹರೀಶನ ಕೊಲೆ ಮಾಡಿದ್ದ ಘಠಾಣಿ ಮತ್ತು ಚಿಲ್ವೇರಿಯ ಕೊಲೆ ಯತ್ನ ಪ್ರಕರಣದಲ್ಲಿ ಹಾಗೂ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next