Advertisement

ಊಟಕ್ಕೆ ಕರೆಸಿಕೊಂಡು ಯುವತಿ ಮೇಲೆ ಗ್ಯಾಂಗ್ ರೇಪ್ : ರಾಷ್ಟ್ರಮಟ್ಟದ ನಾಲ್ವರು ಈಜು ಪಟುಗಳ ಬಂಧನ

10:48 AM Mar 30, 2022 | Team Udayavani |

ಬೆಂಗಳೂರು : ಡೇಟಿಂಗ್ ಆಪ್ ನಲ್ಲಿ ಪರಿಚಯವಾದ ಯುವತಿಯನ್ನು ಊಟಕ್ಕೆಂದು ಮನೆಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ ರಾಷ್ಟ್ರಮಟ್ಟದ ನಾಲ್ವರು ಈಜುಪಟುಗಳನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.

Advertisement

ದೆಹಲಿ ಮೂಲದ ರಜತ್ (23), ಶಿವ್ ರಾಣಾ (22), ದೇವ್ ಸರೋಯಿ (25), ಹಾಗೂ ಯೋಗೇಶ್ ಕುಮಾರ್ (26) ಬಂಧಿತರು.

ಆರೋಪಿಗಳು ಮಾ. 24ರಂದು ಪಶ್ಚಿಮ ಬಂಗಾಲ ಮೂಲದ ಯುವತಿಯನ್ನು ಸಂಜಯನಗರದ ಮನೆಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಪಶ್ಚಿಮ ಬಂಗಾಳ ಮೂಲದ ಸಂತ್ರಸ್ತೆ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ವಸಂತನಗರದಲ್ಲಿರುವ ಆಸ್ಪತ್ರೆ ಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಮೀಪದಲ್ಲೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇದರೊಂದಿಗೆ ಯುವತಿ ಡೇಟಿಂಗ್‌ ಆ್ಯಪ್‌ನಲ್ಲಿ ತನ್ನ ಪ್ರೊಫೈಲ್‌ ಹಾಕಿಕೊಂಡಿದ್ದು, ಅದರಲ್ಲಿ ತನ್ನನ್ನು ಸಂಪರ್ಕಿಸುವ ಯುವಕರ ಜತೆ ಡೇಟಿಂಗ್‌ಗೆ ಹೋಗುತ್ತಿದ್ದರು ಎಂಬುದು ಗೊತ್ತಾಗಿದೆ.

ಇದನ್ನೂ ಓದಿ : ಮೂಡ್ಲಕಟ್ಟೆ ರೈಲು ನಿಲ್ದಾಣ ಸರ್ಕಲ್‌ಗೆ ನವರೂಪ

Advertisement

ಇನ್ನೂ ಆರೋಪಿಗಳು ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗೆ ತರಬೇತಿ ಪಡೆಯಲು ಬೆಂಗಳೂರಿಗೆ ಬಂದಿದ್ದು, ಸಂಜಯನಗರದ 80 ಅಡಿ ರಸ್ತೆಯಲ್ಲಿರುವ ಮನೆಯೊಂದರಲ್ಲಿ ವಾಸವಾಗಿದ್ದರು. ಬಸವನಗುಡಿಯ ಈಜುಕೋಳದಲ್ಲಿ ತರಬೇತಿ ಪಡೆಯುತ್ತಿದ್ದರು. ಈ ಮಧ್ಯೆ ಆರೋಪಿಗಳ ಪೈಕಿ ರಜತ್‌, ಡೇಟಿಂಗ್‌ ಆ್ಯಪ್‌ ಮೂಲಕ ಸಂತ್ರಸ್ತೆಯನ್ನು ಪರಿಚಯಿಸಿಕೊಂಡಿದ್ದಾನೆ. ಬಳಿಕ ಇನ್‌ಸ್ಟ್ರಾಗ್ರಾಂನಲ್ಲಿಯೂ ಪರಸ್ಪರ ಚಾಟಿಂಗ್‌ ಮಾಡುತ್ತಿದ್ದು, ಮೊಬೈಲ್‌ ನಂಬರ್‌ ವಿನಿಮಯ ಮಾಡಿಕೊಂಡಿದ್ದರು. ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾದ ಹಿನ್ನೆಲೆಯಲ್ಲಿ ಮಾ.24ರಂದು ರಜತ್‌, ಸಂತ್ರಸ್ತೆಯನ್ನು ಹೋಟೆಲ್‌ನಲ್ಲಿ ಊಟಕ್ಕೆಂದು ಕರೆಸಿಕೊಂಡಿದ್ದಾನೆ. ನಂತರ ಮನೆಯಲ್ಲಿಯೇ ಊಟ ಮಾಡೋಣ ಎಂದು ತನ್ನ ಮನೆಗೆ ಕರೆದೊಯ್ದ ರಜತ್‌, ಆನ್‌ಲೈನ್‌ ಮೂಲಕ ಊಟ ಆರ್ಡರ್‌ ಮಾಡಿ ತರಿಸಿಕೊಂಡಿದ್ದಾನೆ. ಐವರು ಒಟ್ಟಿಗೆ ಕೂತು ಊಟ ಹಾಗೂ ಮದ್ಯದ ಪಾರ್ಟಿ ಮಾಡಿದ್ದಾರೆ.

ತಡರಾತ್ರಿಯಾಗಿದ್ದರಿಂದ ಸಂತ್ರಸ್ತೆ ರಜತ್‌ ಕೊಠಡಿಯಲ್ಲಿ ಮಲಗಿದ್ದರು. ಈ ವೇಳೆ ಆರೋಪಿ ರಜತ್‌ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ರಜತ್‌ ಸೂಚನೆ ಮೇರೆಗೆ ಇತರೆ ಮೂವರು ಆರೋಪಿಗಳು ಮದ್ಯದ
ಅಮಲಿನಲ್ಲಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next