Advertisement

Bengaluru Crime: ಹವಾ ತೋರಿಸಲು ಹೋಗಿ ಹೆಣವಾದ!

10:13 AM Jul 02, 2024 | Team Udayavani |

ಬೆಂಗಳೂರು: ಜೀವನಹಳ್ಳಿ ರೈಲ್ವೆ ಹಳಿ ಬಳಿ ಎರಡು ದಿನದ ಹಿಂದೆ ನಡೆದಿದ್ದ ವಿಘ್ನೇಶ್‌ ಅಲಿಯಾಸ್‌ ಅಪ್ಪು (35) ಎಂಬಾತನ ಕೊಲೆ ಪ್ರಕರಣವನ್ನು ಪತ್ತೆ ಹಚ್ಚಿರುವ ಪುಲಕೇಶಿನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಜೀವನಹಳ್ಳಿಯ ಅರುಣ್‌ ಕುಮಾರ್‌ (32), ಜಾನ್‌ ಜಾಕೋಬ್‌ ಆ್ಯಂಡ್ರೋ (29), ಪ್ರಶಾಂತ್‌ (30), ಸಂಜೀವ್‌ (35) ಬಂಧಿತರು.

ಆರೋಪಿಗಳು ಜೂ.29ರಂದು ರಾತ್ರಿ ಜೀವನಹಳ್ಳಿ ರೈಲ್ವೆ ಹಳಿ ಬಳಿ ಕುರುಬರಹಳ್ಳಿ ನಿವಾಸಿ ವಿಘ್ನೇಶ್ ಅಲಿಯಾಸ್‌ ಅಪ್ಪು ಎಂಬಾತನಿಗೆ ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದರು. ‌

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಕೊಲೆಯಾದ ಅಪ್ಪು ಈ ಹಿಂದೆ ಜೀವನಹಳ್ಳಿ ಕೊಳೆಗೇರಿಯಲ್ಲಿ ನೆಲೆಸಿದ್ದ. ಆಗ ಏರಿಯಾದಲ್ಲಿ ಪ್ರಾಬಲ್ಯ ಸಾಧಿಸಲು ಏರಿಯಾದ ಹುಡುಗರಾದ ಅರುಣ್‌ ಕುಮಾರ್‌ ಹಾಗೂ ಇತರ ಆರೋಪಿಗಳ ಮೇಲೆ ಅನಗತ್ಯವಾಗಿ ಹಲ್ಲೆ ನಡೆಸಿದ್ದ. ಅದೇ ವಿಚಾರಕ್ಕೆ ಅರುಣ್‌ ಮತ್ತು ತಂಡ ಕೋಪಗೊಂಡು, ದ್ವೇಷ ಸಾಧಿಸುತ್ತಿತ್ತು. ಜತೆಗೆ ಮಾದಕ ವಸ್ತು ಮಾರಾಟ ಮಾಡಿದ ಆರೋಪದಡಿ ವಿಘ್ನೇಶ್‌ ವಿರುದ್ಧ ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರಿಂದ ವಿಘ್ನೇಶ್‌, ಜೀವನ ಹಳ್ಳಿಯಿಂದ ಕುರುಬರಹಳ್ಳಿಗೆ ಮನೆ ಸ್ಥಳಾಂತರಿಸಿದ್ದ ಎಂದು ಪೊಲೀಸರು ಹೇಳಿದರು.

ಜೂನ್‌ 29ರಂದು ಮಧ್ಯಾಹ್ನ ಜೀವನಹಳ್ಳಿಗೆ ಬಂದಿದ್ದ ಅಪ್ಪು ಮತ್ತೆ ಅರುಣ್‌ಕುಮಾರ್‌ ಮತ್ತು ಜಾನ್‌ ಜತೆ ಕಿರಿಕ್‌ ತೆಗೆದು ಗಲಾಟೆ ಮಾಡಿ ಹೋಗಿದ್ದ. ರಾತ್ರಿ ಮತ್ತೆ ಜೀವನಹಳ್ಳಿಯ ರೈಲ್ವೆ ಹಳಿ ಬಳಿ ಬಂದಿದ್ದ ಅಪ್ಪು, ಅರುಣ್‌ಕುಮಾರ್‌, ಜಾನ್‌ ಸೇರಿ ನಾಲ್ವರು ಆರೋಪಿಗಳ ಜತೆಗೆ ಗಲಾಟೆ ಮಾಡಿದ್ದ. ಅದರಿಂದ ಕೆರಳಿದ ಆರೋಪಿಗಳು ಅಪ್ಪು ಬಳಿ ಇದ್ದ ಚಾಕುವನ್ನೇ ಕಿತ್ತುಕೊಂಡು ಹೊಟ್ಟೆ, ಎದೆ ಭಾಗಕ್ಕೆ ಹಲವು ಬಾರಿ ಇರಿದು, ಅಲ್ಲೇ ಇದ್ದ ಕಲ್ಲನ್ನು ಅಪ್ಪು ತಲೆ ಮೇಲೆ ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

Advertisement

ಹಲ್ಲೆ ಮಾಡಿದ್ದಕ್ಕೆ ಕೊಲೆ: ರೈಲ್ವೆ ಹಳಿ ಬಳಿ ಮೃತದೇಹ ಬಿದ್ದಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪುಲಿಕೇಶಿನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದರು. ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದರು. ಇನ್ನು ವಿಚಾರಣೆಯಲ್ಲಿ ಅನಗತ್ಯವಾಗಿ ತಮ್ಮ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ವಿಘ್ನೇಶ್ ನನ್ನು ಕೊಲೆ ಮಾಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next