Advertisement

ಅವಳಿ ಕೊಲೆ ಪ್ರಕರಣ : ಬಂಧಿಸಲು ಹೋದ ಪೋಲೀಸರ ಮೇಲೆ ದಾಳಿ, ಆರೋಪಿ ಕಾಲಿಗೆ ಗುಂಡೇಟು

07:52 PM Apr 14, 2021 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಮತ್ತೂಮ್ಮೆ ಪೊಲೀಸರ ಬಂದೂಕು ಸದ್ದು ಮಾಡಿದೆ. ನಗರದ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅವಳಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಕಾಲಿಗೆ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಗುಂಡು ಹೊಡೆದು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.

Advertisement

ನಗರದ ಕೋಣನಕುಂಟೆ ನಿವಾಸಿ ಮಂಜುನಾಥ ಅಲಿಯಾಸ್‌ ಅಂಬಾರಿ (32) ಪೊಲೀಸರಿಂದ ಗುಂಡೇಟು ತಿಂದಿರುವ ಆರೋಪಿ.

ಏಪ್ರಿಲ್‌ 7ರಂದು ಘಟನೆ:
ಆರೋಪಿ, ಏಪ್ರಿಲ್‌ 7ರಂದು ರಾತ್ರಿ ಜೆ.ಪಿ. ನಗರದಲ್ಲಿ ವಾಸವಿದ್ದ ಪಶ್ಚಿಮ ಬಂಗಾಳ ಮೂಲದ ಮಮತಾ ಬಸು ಹಾಗೂ ಇವರ ಮಗನ ಸ್ನೇಹಿತ ಒಡಿಶಾ ಮೂಲದ ದೇವಬ್ರತಾ ಎಂಬವರನ್ನು ಚಿನ್ನಾಭರಣ ಕಳ್ಳತನಕ್ಕಾಗಿ ಕೊಲೆ ಮಾಡಿದ್ದನು.

ದೇವಬ್ರತಾ ಬಾರ್‌ನಲ್ಲಿ ಮದ್ಯ ಸೇವಿಸಿ ಬಳಿಕ ಬಾರ್‌ ಪಕ್ಕದಲ್ಲಿದ್ದ ಅಂಗಡಿಯಲ್ಲಿ ಸಿಗರೇಟ್‌ ಖರೀದಿಸಿದ್ದರು. ಗೂಗಲ್‌ ಪೇನಲ್ಲಿ ಹಣ ಪಾವತಿಸಲು ಆಗದಿದ್ದಾಗ, ಬಾರ್‌ನ ಪಕ್ಕದ ಟೇಬಲ್‌ನಲ್ಲಿದ್ದ ಆರೋಪಿ ಮಂಜುನಾಥ, ಹೊರಗೆ ಬಂದು ಸಿಗರೇಟ್‌ನ ಹಣ ಪಾವತಿಸಿದ್ದನು. ಬಳಿಕ, ದೇವಬ್ರತಾ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆತನನ್ನು ಹಿಂಬಾಲಿಸಿ, ಅವರ ಬಳಿ ಇದ್ದ ಮೊಬೈಲ್‌ ಕಳವು ಮಾಡಲು ಯತ್ನಿಸಿದ್ದನು. ಬಳಿಕ, ಮತ್ತೆ ಹಿಂಬಾಲಿಸಿಕೊಂಡು ಹೋಗಿದ್ದನು.

ಮನೆ ಬಳಿ ಬಂದ ದೇವಬ್ರತಾ, ಮನೆಯ ಕಾಲಿಂಗ್‌ಬೆಲ್‌ ಮಾಡಿದ್ದರು. ಆಗ ಮಮತಾ ಬಸು ಬಾಗಿಲು ತೆಗೆದಿದ್ದರು. ಈ ವೇಳೆ ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ಆರೋಪಿ ನೋಡಿದ್ದನು. ಬಳಿಕ, ಆರೋಪಿ ಅಲ್ಲಿಂದ ಕೋಣನಕುಂಟೆಗೆ ತೆರಳಿ ಬೈಕ್‌ ಕಳ್ಳತನ ಮಾಡಿ ಚಾಕುವೊಂದನ್ನು ಖರೀದಿಸಿದ್ದನು. ರಾತ್ರಿ 12 ಗಂಟೆ ಸುಮಾರಿಗೆ ಮತ್ತೆ ದೇವಬ್ರತಾ ಅವರ ಮನೆ ಬಳಿ ಬಂದು ಬಾಗಿಲು ಬಡಿದಿದ್ದನು. ದೇವಬ್ರತಾ ಬಾಗಿಲು ತೆಗೆಯುತ್ತಿದ್ದಂತೆ ಆರೋಪಿ ಒಳನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದನು.

Advertisement

ಇದನ್ನೂ ಓದಿ :ಶಾಸಕ ರಾಜುಗೌಡಗೂ ಕೋವಿಡ್ ಪಾಸಿಟಿವ್ ;ಬೆಂಗಳೂರು ಆಸ್ಪತ್ರೆಗೆ ದಾಖಲು

ಕೊಲೆ ಮಾಡಿ ಚಿನ್ನಾಭರಣ ಕಳವು:
ದೇವಬ್ರತಾಗೆ ಚಾಕುವಿನಿಂದ ಚುಚ್ಚಿದ ಬಳಿಕ ಆರೋಪಿ, ಮನೆಯ ಮೊದಲ ಮಹಡಿ ಕೋಣೆಗೆ ತೆರಳಿದ್ದಾನೆ. ಅಲ್ಲಿ ಮಲಗಿದ್ದ ಮಮತಾ ಅವರ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದನು. ಕೊರಳಲಿದ್ದ ಚಿನ್ನದ ಸರ, ಬಳೆ, ಬ್ರಾಸ್ಲೆಟ್‌, ನಾಲ್ಕು ಮೊಬೈಲ್, ಎರಡು ಲ್ಯಾಪ್‌ಟಾಲ್‌, ಹಾರ್ಡ್‌ಡಿಸ್ಕ್ ಕಳವು ಮಾಡಿ ಪರಾರಿಯಾಗಿದ್ದನು. ಮರುದಿನ ಮನೆ ಕೆಲಸದವರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿತ್ತು. ವಿಷಯ ತಿಳಿದ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದರು.

ಹೆಡ್‌ಕಾನ್ಸ್‌ಟೇಬಲ್‌ ಮೇಲೆ ಹಲ್ಲೆ:
ಆರೋಪಿ ಮಂಜುನಾಥ, ಮಂಗಳವಾರ (ಏಪ್ರಿಲ್‌ 13) ರಾತ್ರಿ 7.30ರ ಸಮಯದಲ್ಲಿ ಕೋಣನಕುಂಟೆಯ ಆದಿತ್ಯನಗರದ ಸಮೀಪ ಇರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು. ಪುಟ್ಟೇನಹಳ್ಳಿ ಠಾಣೆ ಇನ್ಸ್‌ಪೆಕ್ಟರ್‌ ಕಿಶೋರ್‌ಕುಮಾರ್‌ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲು ಮುಂದಾಗಿತ್ತು. ಈ ವೇಳೆ ಆರೋಪಿ, ಹೆಡ್‌ಕಾನ್ಸ್‌ಟೇಬಲ್‌ ಸಾಧಿಕ್‌ ಅವರಿಗೆ ಡ್ರ್ಯಾಗರ್‌ನಿಂದ ಇರಿದಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್‌ ಕಿಶೋರ್‌ ಕುಮಾರ್‌, ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಆರೋಪಿಗೆ ಶರಣಾಗುವಂತೆ ತಿಳಿಸಿದ್ದಾರೆ. ಆದರೂ, ಮತ್ತೆ ಹಲ್ಲೆ ನಡೆಸಲು ಮುಂದಾದ ಆರೋಪಿಯಿಂದ ತಮ್ಮ ಆತ್ಮರಕ್ಷಣೆಗಾಗಿ ಆರೋಪಿಯ ಬಲಗಾಲಿಗೆ ಗುಂಡು ಹೊಡೆದಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆರೋಪಿಯಿಂದ ಹಲ್ಲೆಗೊಳಗಾದ ಹೆಡ್‌ಕಾನ್ಸ್‌ಟೇಬಲ್‌ ಸಾಧಿಕ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿ ಮಂಜುನಾಥ್‌, 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ವಿಚಾರಣೆ ವೇಳೆ ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next