Advertisement

ಲಾಠಿ ಠಾಣೆಯಲ್ಲಿ ಬಿಟ್ಟು ಬನ್ನಿ: ಬೆಂಗಳೂರು ನಗರ ಪೊಲೀಸರಿಗೆ ಭಾಸ್ಕರ್ ರಾವ್ ಸೂಚನೆ

09:40 AM Mar 28, 2020 | Hari Prasad |

ಬೆಂಗಳೂರು: ಕೋವಿಡ್ 19 ಮಹಾಮಾರಿ ಹಿನ್ನಲೆಯಲ್ಲಿ ರಾಷ್ಟ್ರಾದ್ಯಂತ 21ದಿನಗಳ ಕಾಲ ಲಾಕ್ ಡೌನ್ ಸ್ಥಿತಿ ಘೋಷಣೆಯಾಗಿದೆ. ಇದಕ್ಕೆ ಪೂರಕವಾಗಿ ರಾಜ್ಯದಲ್ಲೂ ಸಹ ಜನರು ವಿನಾಕಾರಣ ಮನೆಯಿಂದ ಹೊರ ಬರದಂತೆ ಸರಕಾರ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ. ಮತ್ತು ಇದರ ಜವಾಬ್ದಾರಿಯನ್ನು ರಾಜ್ಯ ಪೊಲೀಸ್ ಇಲಾಖೆ ವಹಿಸಿಕೊಂಡಿದೆ.

Advertisement

ಕಳೆದ ಎರಡು ದಿನಗಳಿಂದ ಮನೆಯಿಂದ ಹೊರಗೆ ಬರುವವರ ಮೇಲೆ ಪೊಲೀಸರು ಲಾಠಿ ಬೀಸುತ್ತಿದ್ದಾರೆ ಮತ್ತು ಈ ಮೂಲಕ ಜನರು ವಿನಾಕಾರಣ ಮನೆಬಿಟ್ಟು ಹೊರಬರದಂತೆ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ.

ಆದರೆ ಇಂದು ಬೆಂಗಳೂರು ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಕೆಲವೊಂದು ನಿರ್ದೇಶನಗಳನ್ನು ನೀಡಿರುವ ನಗರ ಪೊಲೀಸ್ ಆಯುಕ್ತರಾಗಿರುವ ಭಾಸ್ಕರ್ ರಾವ್ ಅವರು, ಸಾರ್ವಜನಿಕರ ಮೇಲೆ ಯಾವುದೇ ಕಾರಣಕ್ಕೂ ಲಾಠಿ ಪ್ರಯೋಗಿಸಬಾರದು ಹಾಗೂ ಎಲ್ಲರೊಂದಿಗೂ ತಾಳ್ಮೆ ಮತ್ತು ಸಾವಧಾನದಿಂದ ವರ್ತಿಸುವಂತೆ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಪೊಲೀಸ್ ಕಾನ್ ಸ್ಟೇಬಲ್ ಗಳು, ಹೆಡ್ ಕಾನ್ ಸ್ಟೇಬಲ್ ಗಳು, ಎ.ಎಸ್.ಐ. ಮತ್ತು ಪಿ.ಎಸ್.ಐ.ಗಳಿಗೆ ಸೂಚನೆಯನ್ನು ನೀಡಿದ್ದಾರೆ.

ಸಿ.ಎ.ಆರ್., ಕೆ.ಎಸ್.ಆರ್.ಪಿ. ಸಿಬ್ಬಂದಿಗಳನ್ನು ಹೊರತುಪಡಿಸಿ ಬೇರಿನ್ಯಾರಿಗೂ ಲಾಠಿ ಹಿಡಿಯಲು ಅವಕಾಶವಿರುವುದಿಲ್ಲ. ಇವರೂ ಸಹ ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಲಾಠಿ ಪ್ರಯೋಗ ಮಾಡಲಷ್ಟೇ ಅನುಮತಿ ಇರುತ್ತದೆ. ಪ್ರತೀದಿನ ಬೆಳಿಗ್ಗೆ ದಿನಪತ್ರಿಕೆ ವಿತರಿಸುವ ಹುಡುಗರಿಗೆ ಯಾವುದೇ ರೀತಿಯ ತೊಂದರೆಯನ್ನು ನೀಡದಂತೆ ಪೊಲೀಸ್ ಆಯುಕ್ತರು ಸ್ಪಷ್ಟ ಸೂಚನೆಯನ್ನು ನೀಡಿದ್ದಾರೆ. ಪಾಸ್ ಇಲ್ಲದಿದ್ದರೂ ಸಹ ಪೇಪರ್ ವಿತರಿಸುವ ಹುಡುಗರಿಗೆ ತೊಂದರೆ ನೀಡದಂತೆ ಸೂಚನೆಯನ್ನು ನೀಡಲಾಗಿದೆ.

ತರಕಾರಿ ಮಾರುಕಟ್ಟೆಗಳು ತೆರೆದಿರುವ ಬೆಳಗ್ಗಿನ ಸಂದರ್ಭದಲ್ಲಿ ಮಾರಾಟ ಪ್ರದೇಶದಲ್ಲಿ ಸೂಕ್ತ ರೀತಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಪೊಲೀಸರು ಗಮನಹರಿಸಬೇಕು. ವ್ಯಾಪಾರಿಗಳ ನಡುವೆ ಹತ್ತು ಅಡಿ ಅಂತರ ಇರುವಂತೆ ನೋಡಿಕೊಂಡು ಅವರು ವ್ಯಾಪಾರ ಮುಗಿಸಿ ಹೋಗುವವರೆಗೆ ಅವರಿಗೆ ಯಾವುದೇ ರೀತಿಯಲ್ಲಿ ತೊಂದರೆ ನೀಡಬಾರದು ಎಂದು ಭಾಸ್ಕರ್ ರಾವ್ ತನ್ನ ಸಿಬ್ಬಂದಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

Advertisement

ಹಾಗೆಯೇ ನಗರದಲ್ಲಿ ಆಹಾರ ವಿತರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವವರಿಗೂ ವಿನಾಕಾರಣ ತೊಂದರೆ ನೀಡದಂತೆ ಸ್ಪಷ್ಟ ಸೂಚನೆಯನ್ನು ನೀಡಲಾಗಿದೆ.ತುರ್ತು ಪರಿಸ್ಥಿತಿಗಾಗಿ ಹೊರ ಬಂದವರ ಬಳಿ ತಾಳ್ಮೆಯಿಂದ ವ್ಯವಹರಿಸಿ ಅವರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುವಂತೆಯೂ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.

ಇನ್ನು ಯಾರಾದರೂ ವಿನಾಕಾರಣ ವಾಹನಗಳಲ್ಲಿ ಸಂಚರಿಸುವುದು ಕಂಡುಬಂದರೆ ಅಂತವರ ವಾಹನಗಳನ್ನು ವಶಪಡಿಸಿಕೊಂಡು ಸಂಜೆ ಬಳಿಕ ಅದನ್ನು ಪಡೆದುಕೊಂಡು ಹೋಗುವಂತೆ ಅವರಿಗೆ ಸೂಚಿಸಬೇಕೆಂಬ ನಿರ್ದೇಶನ ನಗರ ಪೊಲೀಸರಿಗೆ ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next