ಬೆಂಗಳೂರು: ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಿಂದ ಹಲ್ಲೆಗೊಳಗಾದ ಇಬ್ಬರ ಪೈಕಿ ಓರ್ವ ಸಾವಿಗೀಡಾದರೆ, ಮತ್ತೂರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಂಜನಾಪುರದ ಆವಲಹಳ್ಳಿ ನಿವಾಸಿ ಸಲ್ಮಾನ್(25) ಮೃತಪಟ್ಟ ದುರ್ದೈವಿ. ಸಲೀಂ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹಲ್ಲೆ ನಡೆಸಿದ ಇಬ್ಬರು ಸೆಕ್ಯೂರಿ ಗಾರ್ಡ್‌ಗಳು ಸೇರಿದಂತೆ ಐವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಲ್ಮಾನ್ ಹಾಗೂ ಸಲೀಂ ದ್ವಿಚಕ್ರ ವಾಹನದಲ್ಲಿ ಸೌತ್ ಅವೆನ್ಯೂ ಲೇಔಟ್ ನಿರ್ಮಾಣ ಹಂತದ ಕಟ್ಟಡದ ಬಳಿ ಗುರುವಾರ ಮುಂಜಾನೆ ಸುಮಾರು 3.30ರಲ್ಲಿ ತೆರಳಿದ್ದರು. ಎರಡು ಸೆಂಟ್ರಿಂಗ್ ಶೀಟ್‌ಗಳನ್ನು ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ್ದರು.
ಅಷ್ಟರಲ್ಲಿ ಇವರನ್ನು ಗಮನಿಸಿದ ಸೆಕ್ಯೂರಿಗಾರ್ಡ್‌ಗಳು ಇಬ್ಬರನ್ನು ಹಿಡಿದುಕೊಂಡು ಕೈ-ಕಾಲು ಕಟ್ಟಿಹಾಕಿ ಕೋಲಿನಿಂದ ಹಲ್ಲೆ ನಡೆಸಿದ್ದರು. ಗುರುವಾರ ಬೆಳಗ್ಗೆ ಸುಮಾರು 7.30ಕ್ಕೆ ಸಲ್ಮಾನ್ ಪ್ರಜ್ಞೆ ತಪ್ಪಿ ಹೋಗಿದ್ದ. ಆತಂಕಗೊಂಡ ಸೆಕ್ಯೂರಿಟಿ ಗಾರ್ಡ್‌ಗಳು ಹೊಯ್ಸಳ ಗಸ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿದ ಹೊಯ್ಸಳ ಪೊಲೀಸರು ಇಬ್ಬರು ಗಾಯಾ ಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು.
ಆ ಸಂದರ್ಭದಲ್ಲಿ ಇಬ್ಬರನ್ನು ಪರೀಕ್ಷಿಸಿದ ವೈದ್ಯರು ಸಲ್ಮಾನ್ ಮೃತಟ್ಟಿರುವುದನ್ನು ದೃಢಪಡಿಸಿ ದ್ದರು. ಇನ್ನು ಗಂಭೀರವಾಗಿ ಗಾಯಗೊಂಡಿರುವ ಸಲೀಂಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಕೋಣನಕುಂಟೆ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಸಲ್ಮಾನ್ ಹೇಗೆ ಮೃತಪಟ್ಟಿದ್ದಾನೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.