Advertisement

Bengaluru: ರೈಲಿನಲ್ಲಿ ನಗರಕ್ಕೆ ಬಂದು ಸರಗಳ್ಳತನ ನಡೆಸುತ್ತಿದ್ದ ರಾಜಸ್ಥಾನದ ವ್ಯಕ್ತಿ ಬಂಧನ

03:28 PM Aug 24, 2024 | Team Udayavani |

ಬೆಂಗಳೂರು: ರೈಲು, ಬಸ್ಸುಗಳಲ್ಲಿ ರಾಜಸ್ಥಾನದಿಂದ ಬೆಂಗಳೂರಿಗೆ ಬಂದು ಸರಗಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಬಂಧಿಸಿದ ಜಯನಗರ ಠಾಣೆ ಪೊಲೀಸರು, 6.70 ಲಕ್ಷ ರೂ. ಮೌಲ್ಯದ 100ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ.

Advertisement

ರಾಜಸ್ಥಾನದ ನಿವಾಸಿ ಸಂತೋಷ್‌ ಬಂಧಿತ. ಬಂಧನದಿಂದ 2 ಸರ ಕಳ್ಳತನ, 1 ದ್ವಿಚಕ್ರ ಕಳವು ಪ್ರಕರಣ ಪತ್ತೆಯಾಗಿದೆ.

ಸಂತೋಷ್‌ ರಾಜಸ್ಥಾನದಿಂದ ರೈಲು ಅಥವಾ ಬಸ್‌ ಮೂಲಕ ಬೆಂಗಳೂರಿಗೆ ಬರುತ್ತಿದ್ದ. ನಂತರ ದ್ವಿಚಕ್ರವಾಹನ ಕದಿಯುತ್ತಿದ್ದ. ಕದ್ದ ದ್ವಿಚಕ್ರವಾಹನದಲ್ಲಿ ನಗರದ ವಿವಿಧೆಡೆ ಸುತ್ತಾಡಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಟಾರ್ಗೆಟ್‌ ಮಾಡಿ ಚಿನ್ನದ ಸರ ಕಸಿದು ಪರಾರಿಯಾಗುತ್ತಿದ್ದ. ಕದ್ದ ಚಿನ್ನದ ಸರಗಳನ್ನು ಕರಗಿಸಿ ರಾಜಸ್ಥಾನದಲ್ಲಿ ಮಾರಾಟ ಮಾಡುತ್ತಿದ್ದ. ಕಳೆದ ಜೂನ್‌ 26ರಂದು ಜಯನಗರ 8ನೇ ಬ್ಲಾಕ್‌ ಬಳಿ ವಾಯುವಿಹಾರ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಹಿಂಬಾಲಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದ ಸಂತೋಷ್‌, ಅವರ ಕತ್ತಿನಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಯನಗರ ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಸಂತೋಷ್‌ ಸುಳಿವು ಸಿಕ್ಕಿತ್ತು.

ಆತ ತಿಲಕ್‌ ನಗರ ಪೊಲೀಸರಿಂಧ ಈ ಹಿಂದೆ ಬಂಧನಕ್ಕೊಳಗಾಗಿರುವ ಸುಳಿವು ಸಿಕ್ಕಿತ್ತು. ಸದ್ಯ ಆರೋಪಿಯು ರಾಜಸ್ಥಾನದಲ್ಲಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಆ.7ರಂದು ರಾಜಸ್ಥಾನದ ಗೋಕುಲ್‌ ಪುರಕಲ್ವಾರ ರಸ್ತೆಯಲ್ಲಿ ಸಂತೋಷ್‌ನನ್ನು ಪತ್ತೆಹಚ್ಚಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆತನ ವಿಚಾರಣೆ ವೇಳೆ ಕಳೆದ ಆ.20ರಂದು ಜಯನಗರ 5ನೇ ಬ್ಲಾಕ್‌ ಉದ್ಯಾನವನದ ಬಳಿ ಮಹಿಳೆಯೊ ಬ್ಬರ ಸರ ಕಸಿದುಕೊಂಡು ಪರಾರಿಯಾಗಿದ್ದ ವಿಚಾರವನ್ನು ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿ ಸಂತೋಷ್‌ ಈ ಹಿಂದೆ ಚಿಕ್ಕಪೇಟೆಯಲ್ಲಿ ಆಭರ ಣದ ಅಂಗಡಿಯಲ್ಲಿ ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿದ್ದ. ರಾಜಸ್ಥಾನದಲ್ಲೂ ಹಲವು ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಹೈದರಾಬಾದ್‌, ಮಂಗಳೂರಿನಲ್ಲೂ ಇದೇ ರೀತಿ ಕದಿಯುತ್ತಿದ್ದ ಎಂಬುದು ತನಿಖೆಯಲ್ಲಿ ಕಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.