Advertisement

Bengaluru: ಹೂಡಿಕೆ ನೆಪದಲ್ಲಿ 6 ಕೋಟಿ ವಂಚನೆ: 10 ಜನ ಸೆರೆ

09:00 AM Sep 28, 2024 | Team Udayavani |

ಬೆಂಗಳೂರು: ಆನ್‌ಲೈನ್‌ ಜಾಬ್‌, ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಬೆಂಗಳೂರು ಸೇರಿ ದೇಶಾದ್ಯಂತ 6 ಕೋಟಿ ರೂ. ವಂಚಿಸಿದ ಬೆಂಗಳೂರಿನ 10 ಮಂದಿ ಆರೋಪಿಗಳನ್ನು ಉತ್ತರ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಸೈಯದ್‌ ಯಹ್ಯಾ (32), ಉಮರ್‌ ಫಾರೂಕ್‌ (34), ಮೊಹಮ್ಮದ್‌ ಮಹೀನ್‌(32), ಮೊಹಮ್ಮದ್‌ ಮುಜಾಮಿಲ್‌(25), ತೇಜಸ್‌(35), ಚೇತನ್‌ (35), ವಾಸೀಂ (30), ಸೈಯದ್‌ ಝೈದ್‌(24), ಸಾಹಿ ಅಬ್ದಲ್‌ ಆನಾ (30), ಓಂಪ್ರಕಾಶ್‌(30) ಬಂಧಿತರು.

ಆರೋಪಿಗಳಿಂದ 1.74 ಲಕ್ಷ ರೂ. ನಗದು, 72 ಮೊಬೈಲ್‌ಗ‌ಳು, 182 ಡೆಬಿಟ್‌ ಕಾರ್ಡ್‌ಗಳು, 2 ಲ್ಯಾಪ್‌ಟಾಪ್‌ಗ್ಳು, 133 ಸಿಮ್‌ಕಾರ್ಡ್‌ಗಳು, 127 ಬ್ಯಾಂಕ್‌ ಪಾಸ್‌ ಬುಕ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳೆಲ್ಲರೂ ಆರ್‌.ಟಿ.ನಗರ, ಹೆಬ್ಟಾಳ, ಕೆ.ಜಿ.ಹಳ್ಳಿ, ಸಂಪಿಗೆಹಳ್ಳಿ ವ್ಯಾಪ್ತಿಯವರಾಗಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಟಿ.ದಾಸರಹಳ್ಳಿ ನಿವಾಸಿಯೊಬ್ಬರಿಗೆ ಜೂನ್‌ 20ರಂದು ಆರೋಪಿಗಳು ವಾಟ್ಸ್‌ಆ್ಯಪ್‌ ಮೂಲಕ ಸಂಪರ್ಕಿಸಿ ಆನ್‌ಲೈನ್‌ ಜಾಬ್‌ ನೀಡುವುದಾಗಿ ಭರವಸೆ ನೀಡಿದ್ದಾರೆ. ನಂತರ ವಾಟ್ಸ್‌ಆ್ಯಪ್‌ಗೆ ಕೆಲ ಲಿಂಕ್‌ಗಳನ್ನು ಕಳುಹಿಸಿ, ಟೆಲಿಗ್ರಾಂ ಗ್ರೂಪ್‌ಗೆ ದೂರುದಾರರನ್ನು ಸೇರಿಸಿ, ಕೆಲ ಟಾಸ್ಕ್ಗಳನ್ನು ನೀಡಿದ್ದಾರೆ. ಐಷಾರಾಮಿ ಹೋಟೆಲ್‌ಗ‌ಳ ರಿವ್ಯೂವ್‌ ಮಾಡುವಂತೆ ತಿಳಿಸಿ, ಅದಕ್ಕಾಗಿ ದೂರುದಾರನೇ 150-200 ರೂ. ಹೂಡಿಕೆ ಮಾಡಿ ರಿವ್ಯೂ ಕಳುಹಿಸಿದ್ದಾನೆ. ಅದಕ್ಕೆ ಪ್ರತಿಯಾಗಿ ಆರೋಪಿಗಳು 400-500 ರೂ. ನೀಡುತ್ತಿದ್ದರು. ಬಳಿಕ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್‌ ಇನ್‌ವೆಸ್ಟ್‌ಮೆಂಟ್‌ನಿಂದ ಲಾಭ ಹೆಚ್ಚಾಗಲಿದೆ ಎಂದು ನಂಬಿಸಿ, ದೂರುದಾರರಿಂದ ಜೂನ್‌ 20ರಿಂದ ಜುಲೈ 1ರವರೆಗೆ 25.37 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾರೆ. ಕೆಲ ದಿನಗಳ ದಿನಗಳ ಬಳಿಕ ತಾನೂ ವಂಚನೆಗೊಳಗಾಗಿರುವುದನ್ನು ಅರಿತ ದೂರುದಾರ ಕೂಡಲೇ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿ ಬ್ಯಾಂಕ್‌ ಖಾತೆಗಳ ಮಾಹಿತಿ ಆಧರಿಸಿ 7 ಮಂದಿಯನ್ನು ಆರ್‌ .ಟಿ.ನಗರದಲ್ಲಿ ಬಂಧಿಸಿ, ನಗದು, ಮೊಬೈಲ್‌ಗ‌ಳು, ಬ್ಯಾಂಕ್‌ ಪಾಸ್‌ಗಳು, ಸಿಮ್‌ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಯಿತು.

ಈ ಆರೋಪಿಗಳ ವಿಚಾರಣೆಯಲ್ಲಿ ಇತರೆ ಮೂವರು ಆರೋಪಿಗಳ ಹೆಸರನ್ನು ಬಾಯಿಬಿಟ್ಟಿದ್ದು, ಅವರು ಚೀನಾಕ್ಕೆ ಹೋಗಿರುವ ಮಾಹಿತಿ ನೀಡಿದ್ದರು ಎಂದು ಪೊಲೀಸ್‌ ಆಯುಕ್ತರು ಮಾಹಿತಿ ನೀಡಿದರು.

Advertisement

ಚೀನಾದವರ ಸಂಪರ್ಕ: ಪ್ರಕರಣ ಪ್ರಮುಖ ಆರೋಪಿಗಳಾದ ಸೈಯದ್‌ ಯಹ್ಯಾ, ಉಮರ್‌ ಫಾರೂಕ್‌, ಮೊಹಮ್ಮದ್‌ ಮಹೀನ್‌ ಚೀನಾ ದೇಶಕ್ಕೆ ಹೋಗಿದ್ದು, ಅಲ್ಲಿನ ಕೆಲ ಏಜೆಂಟ್‌ಗಳನ್ನು ಸಂಪರ್ಕಿಸಿದ್ದರು. ಈ ಆರೋಪಿಗಳ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಹೊರಡಿಸಲಾಗಿತ್ತು. ಹೀಗಾಗಿ ಸೆ.15ರಂದು ಬೆಂಗಳೂರಿಗೆ ಬರುತ್ತಿದ್ದಂತೆ ಏರ್‌ ಪೋರ್ಟ್‌ ಅಧಿಕಾರಿಗಳು ಮೂವರನ್ನು ವಶಕ್ಕೆ ಪಡೆದುಕೊಂಡು, ಸೆನ್‌ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇನ್ನು ಈ ಪೈಕಿ ಸೈಯದ್‌ ಯಹ್ಯಾ, ಉಮರ್‌ ಫಾರೂಕ್‌, ಪೀಣ್ಯ ಠಾಣೆ ವ್ಯಾಪ್ತಿಯಲ್ಲಿ ಹೊಸ ಕಚೇರಿ ತೆರೆಯಲು ಸಿದ್ಧತೆ ನಡೆಸಿದ್ದು, ಆ ಕಚೇರಿ ಮೇಲೆ ದಾಳಿ ನಡೆಸಿ 47 ಬ್ಯಾಂಕ್‌ ಪಾಸ್‌ ಬುಕ್‌ಗಳು, 48 ಸಿಮ್‌ ಕಾರ್ಡ್‌ಗಳು, 31 ಡೆಬಿಟ್‌ ಕಾರ್ಡ್‌ಗಳು, 9 ಮೊಬೈಲ್‌ ಗಳು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

21 ರಾಜ್ಯದಲ್ಲಿ 126 ಪ್ರಕರಣಗಳು

ಆರೋಪಿಗಳ ಬಂಧನದಿಂದ ಸ್ಫೋಟಕ ವಿಚಾರವೊಂದು ಬಯಲಾಗಿದ್ದು, ಬಂಧಿತರು ಬೆಂಗಳೂರು ಮಾತ್ರವಲ್ಲದೆ, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಚಂಡಿಗಡ, ಛತ್ತಿಸ್‌ಗಡ್‌, ದೆಹಲಿ, ಗುಜರಾತ್‌, ಹರಿಯಾಣ, ಹಿಮಾಚಲಪ್ರದೇಶ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್‌, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಖಂಡ, ಪಶ್ಚಿಮ ಬಂಗಾಳದಲ್ಲೂ ಹತ್ತಾರು ಮಂದಿಗೆ ವಂಚಿಸಿದ್ದಾರೆ. ಈ ಸಂಬಂಧ ಎನ್‌ ಸಿಆರ್‌ಪಿ ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಕಮಿಷನ್‌ ಕೊಟ್ಟು ದಾಖಲೆ ಖರೀದಿ

ಆರೋಪಿಗಳ ಬಳಿ ಪತ್ತೆಯಾಗಿರುವ ಬ್ಯಾಂಕ್‌ ಪಾಸ್‌ ಬುಕ್‌ಗಳು, ಸಿಮ್‌ ಕಾರ್ಡ್‌ಗಳು, ಫೋನ್‌, ಡೆಬಿಟ್‌ ಕಾರ್ಡ್‌ ಗಳನ್ನು ಪರಿಚಯಸ್ಥರು ಹಾಗೂ ಮಧ್ಯವರ್ತಿಗಳ ಮೂಲಕ ಕೆಲ ಸಾರ್ವಜನಿಕರಿಗೆ ಕಮಿಷನ್‌ ಕೊಟ್ಟು ಅವರಿಂದ ದಾಖಲೆಗಳನ್ನು ಪಡೆದು, ಖರೀದಿಸಿದ್ದಾರೆ. ಬ್ಯಾಂಕ್‌ ಖಾತೆಗೆ ಹಣ ಬೀಳುತ್ತಿದ್ದಂತೆ ಆ ಖಾತೆದಾರರನಿಗೆ ಇಂತಿಷ್ಟು ಕಮಿಷನ್‌ ನೀಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next