Advertisement

ಹೈಕೋರ್ಟ್‌ ಎಚ್ಚರಿಕೆಗಾದರೂ ಬೆಲೆ ಕೊಟ್ಟು ರಸ್ತೆ ಗುಂಡಿಗಳನ್ನು ಮುಚ್ಚಿ

10:55 PM Jan 27, 2022 | Team Udayavani |

ಐಟಿ ಸಿಟಿ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರು ಎಂದಿಗೂ ತನ್ನ ಕೆಟ್ಟ ರಸ್ತೆಗಳಿಂದಲೇ ಕುಖ್ಯಾತಿ ಪಡೆದಿದೆ. ಗುಂಡಿಗಳಿಲ್ಲದ ರಸ್ತೆಗಳೇ ಬೆಂಗಳೂರಿನಲ್ಲಿ ಇಲ್ಲ ಎನ್ನುವಂಥ ಪರಿಸ್ಥಿತಿಯೂ ಒಂದು ಕಾಲದಲ್ಲಿತ್ತು. ಅದರಲ್ಲೂ ಮಳೆಗಾಲ ಬಂತು ಎಂದರೆ ಸಾಕು, ರಸ್ತೆಗಳ ಪರಿಸ್ಥಿತಿ ಹೇಳುವುದೇ ಬೇಡ.

Advertisement

ಈ ವರ್ಷ ಡಿಸೆಂಬರ್‌ ಅಂತ್ಯದವರೆಗೂ ಬೆಂಗಳೂರಿನಲ್ಲಿ ಮಳೆ ಸುರಿಯಿತು. ಇದರಿಂದಾಗಿ ಏಳು ಮಂದಿ ದ್ವಿಚಕ್ರ ವಾಹನ ಸವಾರರು ರಸ್ತೆ ಗುಂಡಿಗಳಿಂದಾಗಿಯೇ ಪ್ರಾಣ ಕಳೆದುಕೊಂಡರು. 2020ಕ್ಕೆ ಹೋಲಿಕೆ ಮಾಡಿದರೆ ಇದು ದ್ವಿಗುಣ. ಅಂದರೆ ಆ ವರ್ಷ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆಯಿಂದಾಗಿ ಬಿದ್ದು ಪ್ರಾಣ ಕಳೆದುಕೊಂಡವರ ಸಂಖ್ಯೆ 3. ಇಷ್ಟು ಮಂದಿಯ ಪ್ರಾಣ ಹೋಗಲು ಪ್ರಮುಖ ಕಾರಣವೇ ರಸ್ತೆಗಳಲ್ಲಿನ ಗುಂಡಿಗಳು. ಈ ವಿಚಾರ ಹೈಕೋರ್ಟ್‌ ಗಮನಕ್ಕೂ ಬಂದಿದ್ದು, ಬಿಬಿಎಂಪಿ ವಿರುದ್ಧ ಕಿಡಿಕಾರಿತ್ತು. ಅಲ್ಲದೆ ಗುಂಡಿ ಮುಚ್ಚಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ವಿವರ ನೀಡುವಂತೆ ಸೂಚನೆಯನ್ನೂ ನೀಡಿತ್ತು.

ಈ ವಿಚಾರ ಗುರುವಾರ ವಿಚಾರಣೆಗೆ ಬಂದಿದ್ದು ಬಿಬಿಎಂಪಿ ವಿರುದ್ಧ ಹೈಕೋರ್ಟ್‌ ಕಿಡಿಕಾರಿದೆ. ಬೆಂಗಳೂರಿನಲ್ಲಿರುವ ಗುಂಡಿಗಳನ್ನು ಮುಚ್ಚಲು ಏನು ಕ್ರಮ ತೆಗೆದುಕೊಂಡಿದ್ದೀರಿ ಮತ್ತು ಇದಕ್ಕೆ ಶಾಶ್ವತ ಪರಿಹಾರವಾಗಿ ಉತ್ತಮ ತಂತ್ರಜ್ಞಾನ ಬಳಕೆ ಮಾಡಬಹುದಲ್ಲವೇ ಎಂಬ ಪ್ರಶ್ನೆಯನ್ನು ಹೈಕೋರ್ಟ್‌ ಕೇಳಿತ್ತು. ಇದಕ್ಕೆ  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಮರ್ಪಕವಾದ ಉತ್ತರವನ್ನೇ ನೀಡಿಲ್ಲ. ಅಲ್ಲದೆ ರಸ್ತೆ ಹಾಳಾಗಲು ಜಲಮಂಡಳಿ, ಬೆಸ್ಕಾಂ, ಗೇಲ್‌ ಸಂಸ್ಥೆಗಳು ಕಾರಣ ಎಂಬ ಉತ್ತರವನ್ನು ನೀಡಿದೆ. ಇದು ಹೈಕೋರ್ಟ್‌ಗೆ ಸಿಟ್ಟು ತರಿಸಿದೆ.

ಹೈಕೋರ್ಟ್‌ ಹೀಗೆ ಬಿಬಿಎಂಪಿಗೆ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಹೊಸದೇನಲ್ಲ. ಪ್ರತೀ ವರ್ಷ ಮಳೆ ಬಿದ್ದಾಗ ರಸ್ತೆಯಲ್ಲಿ ಗುಂಡಿಗಳು ಬೀಳುವುದು, ಅದನ್ನು ನಿರ್ವಹಿಸುವಲ್ಲಿ  ಬಿಬಿಎಂಪಿ ವಿಫ‌ಲವಾಗುವುದು. ಹೈಕೋರ್ಟ್‌ ತರಾಟೆಗೆ ತೆಗೆದುಕೊಳ್ಳುವುದು ಸಾಮಾನ್ಯ ಸಂಗತಿ ಎನ್ನಿಸು ವಷ್ಟರ ಮಟ್ಟಿಗೆ ಆಗಿದೆ. 2 ವರ್ಷಗಳ ಹಿಂದೆ ಇದೇ ಸ್ಥಿತಿ ಎದುರಾಗಿದ್ದು, ನ್ಯಾಯಾಲಯವೇ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿಗೆ ಗಡುವು ನೀಡಿತ್ತಲ್ಲದೆ, ಆ ಪ್ರಕ್ರಿಯೆಯ ಮೇಲುಸ್ತುವಾರಿಯನ್ನು ಕೋರ್ಟ್‌ ವಹಿಸಿಕೊಂಡಿತ್ತು.  ಬಿಬಿಎಂಪಿಯು ಪ್ರತೀ ದಿನ ನಿರ್ದಿಷ್ಟ ಗುಂಡಿಗಳನ್ನು ಮುಚ್ಚಿ ಕೋರ್ಟಿಗೆ ಮಾಹಿತಿ ನೀಡಬೇಕಾಗಿತ್ತು. ಪ್ರತೀ ಸಲ ಆಡಳಿತವನ್ನು ಹೈಕೋರ್ಟ್‌ ತೆಗೆದುಕೊಳ್ಳುವುದು ಒಂದು ಆಡಳಿತ ವ್ಯವಸ್ಥೆಗೆ ತರವಲ್ಲ. ಆಡಳಿತದಲ್ಲಿ  ನ್ಯೂನತೆ ಇರುವುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ.

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬಹುತೇಕ ರಸ್ತೆಗಳು ತೀರಾ ಹದಗೆಟ್ಟಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಡಳಿತ ವ್ಯವಸ್ಥೆಗೆ ಈವರೆಗೆ ಸಾಧ್ಯವಾಗದಿರುವುದು ಮತ್ತು ದೀರ್ಘಾವಧಿಗೆ ಬಾಳಿಕೆ ಬರುವ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಾಗದೆ ಇರುವುದು ನಮ್ಮ ದುರಂತವೇ ಸರಿ. ತಂತ್ರಜ್ಞಾನ ಕ್ಷೇತ್ರದಲ್ಲಿ ಸದಾ ಮುಂಚೂಣಿಯಲ್ಲಿರುವ ರಾಜ್ಯದಲ್ಲಿ ಉನ್ನತ ಮಟ್ಟದ ಹಾಗೂ ಗುಣ ಮಟ್ಟದ ರಸ್ತೆ ನಿರ್ಮಾಣ ಸಾಧ್ಯವಾಗದೆ ಇರುವುದು ಸೋಜಿಗ.  ಗುಣಮಟ್ಟವಿಲ್ಲದ ರಸ್ತೆಗಳಿಂದ ಜೀವಹಾನಿಯ ಜತೆಗೆ ಆಗುತ್ತಿರುವ ಆರೋಗ್ಯ ನಷ್ಟ ಮತ್ತು ಆರ್ಥಿಕ ನಷ್ಟಗಳು ಯಾವ ಆಡಿಟ್‌ಗೂ ಸಿಗಲಾ ರದು. ಇದು ನಗರದ ಆಡಳಿತ ಮಾತ್ರವಲ್ಲ, ರಾಜ್ಯ ಸರಕಾರದ ಕಾರ್ಯ ವೈಖರಿ ಮೇಲೂ ಕಪ್ಪುಚುಕ್ಕೆ ಮೂಡಿಸುತ್ತದೆ. ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಿ, ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next