Advertisement

ಬೆಂಗಳೂರಲ್ಲಿ ಮಲಯಾಳಂನ “ಕೋಲ್ಡ್‌ ಕೇಸ್‌”ಸಿನೆಮಾ ಹೋಲುವ ಪ್ರಕರಣ

12:23 PM Feb 04, 2023 | Team Udayavani |

ಬೆಂಗಳೂರು: ಮಲೆಯಾಳಂನ ಪ್ರಸಿದ್ಧ ಥ್ರಿಲ್ಲರ್‌ ಸಿನೆಮಾ “ಕೋಲ್ಡ್‌ ಕೇಸ್‌’ʼನ ಮಾದರಿಯಲ್ಲೇ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಅಸ್ತಿ ಪಂಜರದ ಮೂಲವನ್ನು ಒಂದೇ ದಿನದಲ್ಲಿ ಪತ್ತೆಹಚ್ಚುವಲ್ಲಿ ಹುಳಿಮಾವು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಅಸ್ತಿ ಪಂಜರ ನೇಪಾಳ ಮೂಲದ ಪುಷ್ಪಾದಾಮಿ (22) ಅವರದ್ದು ಎಂದು ಗುರುತಿಸಲಾಗಿದೆ.

ಅವರು ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯ ನಗರದಲ್ಲಿ ವಾಸವಿದ್ದರು. ಮದ್ಯ ಸೇವಿಸಿ ಜಗಳವಾಡುತ್ತಿದ್ದ ಪತಿಯ ಚಟಕ್ಕೆ ಬೇಸತ್ತ ಪುಷ್ಪಾ ಕಳೆದ ಜು.8ರಂದು ನೇಪಾಳಕ್ಕೆ ಹೋಗಿದ್ದರು.ಬಳಿಕ ವಾಪಸ್‌ ಬಂದಿರಲಿಲ್ಲ. ಪತ್ನಿ ಕಾಣೆಯಾಗಿರುವ ಬಗ್ಗೆ ಹುಳಿಮಾವು ಠಾಣೆಯಲ್ಲಿ ಅಮರ್‌ ದಾಮಿ ಪ್ರಕರಣ ದಾಖಲಿಸಿದ್ದರು. ಹುಳಿಮಾವಿನ ಅಕ್ಷಯ ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಫೆ.2ರಂದು ನೇಣು ಬಿಗಿದ ಸ್ಥಿತಿಯಲ್ಲಿ ಮಾನವನ ಅಸ್ತಿಪಂಜರ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.

ಅಸ್ಥಿ ಸಸ್ಪೆನ್ಸ್‌ ಬೆನ್ನತ್ತಿದ ಪೋಲಿಸರಿಗೆ ಸಿಕ್ಕಿತ್ತು ಸಣ್ಣ ಸಾಕ್ಷ್ಯ:

ಸ್ಥಳದಲ್ಲಿ ಮಹಿಳೆಯ ಚಪ್ಪಲಿ, ಕತ್ತಿನ ನೆಕ್ಲೆಸ್‌ ಪತ್ತೆಯಾಗಿತ್ತು. ಹೀಗಾಗಿ ಪೊಲೀಸರು ಮಿಸ್ಸಿಂಗ್‌ ಕೇಸ್‌ ಹುಡುಕಲು ಶುರು ಮಾಡಿದಾಗ ಕಳೆದ ಜುಲೈನಲ್ಲಿ ಹುಳಿಮಾವು ಠಾಣೆಯಲ್ಲಿ ನೇಪಾಳಿ ಮಹಿಳೆ ನಾಪತ್ತೆ ಬಗ್ಗೆ ಕೇಸ್‌ ದಾಖಲಾಗಿರುವುದು ಗಮನಕ್ಕೆಬಂದಿತ್ತು. ಅಸ್ಥಿ ಪಂಜರದ ಬಳಿ ಸಿಕ್ಕಿರುವ ವಸ್ತುಗಳನ್ನು ನಾಪತ್ತೆಯಾಗಿದ್ದ ಪುಷ್ಪಾ ದಾಮಿಗೆ ಸೇರಿದ್ದಾಗಿದೆಯೇ ಎಂಬುದನ್ನು ಪರಿಶೀಲಿಸಿದಾಗ ಹೋಲಿಕೆಯಾಗಿತ್ತು. ಆ ಸಂದರ್ಭದಲ್ಲಿ ಇದು ಪುಷ್ಪ ದಾಮಿ ಅಸ್ಥಿ ಪಂಜರ ಎಂಬುದು ದೃಢಪಟ್ಟಿತ್ತು. ಮಲೆಯಾಳಂನ ಖ್ಯಾತ ಥ್ರಿಲ್ಲರ್‌ಸಿನಿಮಾಗಳಲ್ಲೊಂದಾದ ʼಕೋಲ್ಡ್‌ ಕೇಸ್‌ʼನಲ್ಲೂ ಇದೇ ಮಾದರಿಯಲ್ಲಿ ಅಸ್ಥಿ ಪಂಜರದಲ್ಲಿ ಪತ್ತೆಯಾದ ಸಣ್ಣ ಸಾಕ್ಷ್ಯದಿಂದ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗಿತ್ತು. ಇದೀಗ ನೈಜ ಪ್ರಕರಣವೊಂದರಲ್ಲಿ ಸಿನಿಮೀಯ ಶೈಲಿಯಲ್ಲೇ ಪೊಲೀಸರು ಮಹಿಳೆಯ ಗುರುತು ಪತ್ತೆ ಹಚ್ಚಿದ್ದಾರೆ. ಅಸ್ಥಿ ಪಂಜರದ ಡಿಎನ್‌ ಎ , ಸತ್ತಅವಧಿಯ ಬಗ್ಗೆ ವಿವರವಾದ ಮಾಹಿತಿ ಪಡೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next