ಕೋಲ್ಕತ್ತಾ: ಎರಡು ಬಾರಿ ಕ್ಯಾನ್ಸರ್ ಗೆದ್ದು ಚೇತರಿಕೆಯಾಗಿದ್ದ ಬೆಂಗಾಲಿ ಸಿನಿಮಾರಂಗದ ಖ್ಯಾತ ನಟಿ ಆ್ಯಂಡ್ರಿಲಾ ಶರ್ಮಾ (24) ಇತ್ತೀಚೆಗೆ ಪಾರ್ಶ್ವವಾಯುವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇದೀಗ ನಟಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ನ. 1 ರಂದು ಬ್ರೈನ್ ಸ್ಟ್ರೋಕ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದ ಆ್ಯಂಡ್ರಿಲಾ ಶರ್ಮಾ ಅವರ ಪರಿಸ್ಥಿತಿ ದಿನ ಕಳೆದಂತೆ ಹದಗೆಟ್ಟಿತ್ತು. ಅವರನ್ನು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನ.14 ರಂದು ಆ್ಯಂಡ್ರಿಲಾ ಶರ್ಮಾರಿಗೆ ಅನೇಕಾ ಬಾರಿ ಹೃದಯ ಸ್ತಂಭನ (ಕಾರ್ಡಿಯಾಕ್ ಅರೆಸ್ಟ್) ಉಂಟಾಗಿತ್ತು. ನ.20 ( ಭಾನುವಾರ) ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ.
ಆ್ಯಂಡ್ರಿಲಾ ಶರ್ಮಾ ಬೆಂಗಾಲಿ ಸಿನಿಮಾರಂಗದಲ್ಲಿ ಜನಪ್ರಿಯ ಹೆಸರು. ʼ ಜುಮೂರ್ʼ , ʼ ಭೋಲೋ ಬಾಬಾ ಪರ್ ಕರೇಗಾʼ ಸಿನಿಮಾಗಳು ಬೆಂಗಾಲಿ ಬಣ್ಣದ ಲೋಕದಲ್ಲಿ ಆ್ಯಂಡ್ರಿಲಾ ಅವರಿಗೆ ಹೆಸರು ತಂದು ಕೊಟ್ಟಿತು. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ನಟಿಗೆ ಕ್ಯಾನ್ಸರ್ ರೋಗ ವಕ್ಕರಿಸುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದ ಪರಿಣಾಮ ಕ್ಯಾನ್ಸರ್ ನಿಂದ ಆ್ಯಂಡ್ರಿಲಾ ಹೊರ ಬಂದಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ ಮೇಲೆ ಅವರಿಗೆ ಮತ್ತೊಮ್ಮೆ ಕ್ಯಾನ್ಸರ್ ಕಾಡುತ್ತದೆ. ಈ ಬಾರಿಯೂ ದಿಟ್ಟೆಯಾಗಿ ಹೋರಾಡಿ, ಆಪರೇಷನ್ ಮೂಲಕ ಕ್ಯಾನ್ಸರ್ ಗೆಡ್ಡೆ ತೆಗೆದು, ಕೀಮೋಥೆರಪಿಗೆ ಒಳಗಾಗಿ ಕ್ಯಾನ್ಸರ್ ಗೆದ್ದು, ಇತರರಿಗೆ ಸ್ಪೂರ್ತಿಯಾಗಿದ್ದರು.