ಕೋಲ್ಕತ್ತಾ: ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಮೇಲೆ ಮತ್ತೆ ಕಲ್ಲು ತೂರಾಟ ಆದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಭಾನುವಾರ ( ಜ.9 ರಂದು) ಪಶ್ಚಿಮ ಬಂಗಾಳದ ವಂದೇ ಭಾರತ್ ರೈಲಿನ್ ಸಿ14 ಕಂಪಾರ್ಟ್ಮೆಂಟ್ ಮೇಲೆ ಕಲ್ಲು ತೂರಾಟ ನಡೆದಿದೆ. ಕಳೆದ ವಾರವೂ ಇದೇ ರೀತಿಯ ಕಲ್ಲು ತೂರಾಟದ ಘಟನೆ ಪಶ್ಚಿಮ ಬಂಗಾಳದಲ್ಲೇ ನಡೆದಿದ್ದು, ಪಶ್ಚಿಮ ಬಂಗಾಳದ ಹೌರಾದಿಂದ ನ್ಯೂ ಜಲ್ಪೈಗುರಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಲ್ಲು ತೂರಾಟ ನಡೆಸಲಾಗಿತ್ತು. ಆ ಘಟನೆಯ ತನಿಖೆ ನಡೆಯುತ್ತಿರುವಾಗಲೇ ಈಗ ಮತ್ತೊಂದು ಕಲ್ಲು ತೂರಾಟದ ಘಟನೆ ಬೆಳಕಿಗೆ ಬಂದಿದೆ.
ಕಲ್ಲು ತೂರಾಟದ ಘಟನೆಯಿಂದಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕಾರ್ಯಾಚರಣೆಗೆ ಅಡ್ಡಿಯುಂಟಾಯಿತು. ಬೋಲ್‌ಪುರದ ರೈಲ್ವೇ ನಿಲ್ದಾಣದಲ್ಲಿ ರೈಲು ಕೇವಲ ಎರಡು ನಿಮಿಷಗಳ ನಿಲುಗಡೆ ಆಗಬೇಕಿದ್ದ ರೈಲನ್ನು 10 ನಿಮಿಷಗಳ ಕಾಲ ನಿಲ್ಲುವಂತೆ ಒತ್ತಾಯಿಸಲಾಯಿತು.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.