ಪಶ್ಚಿಮ ಬಂಗಾಳ: 12 ವರ್ಷದ ಬಾಲಕನೊಬ್ಬ ರೈಲು ದುರಂತವನ್ನು ತಪ್ಪಿಸಿರುವ ಘಟನೆ ಇತ್ತೀಚೆಗೆ ಪಶ್ಚಿಮ ಬಂಗಾಳದ ಮಾಲ್ಡಾದ ರೈಲ್ವೆ ಯಾರ್ಡ್ ಬಳಿ ನಡೆದಿರುವುದು ವರದಿಯಾಗಿದೆ.
12 ವರ್ಷದ ಮುರ್ಸಲೀನ್ ಶೇಖ್ ರೈಲ್ವೇ ಯಾರ್ಡ್ ನಲ್ಲಿ ಕೆಲಸ ಮಾಡುವ ಕಾರ್ಮಿಕರೊಬ್ಬರ ಮಗ. ಘಟನೆ ವೇಳೆ ಮುರ್ಸಲೀನ್ ಕೆಲ ಕಾರ್ಮಿಕರೊಂದಿಗೆ ಯಾರ್ಡ್ ನಲ್ಲಿ ಇದ್ದ. ಕಾರ್ಮಿಕರೊಂದಿಗೆ ರೈಲ್ವೇ ಹಳಿಯ ಯಾರ್ಡ್ ನಲ್ಲಿದ್ದ ಮುರ್ಸಲೀನ್ ಶೇಖ್ ರೈಲಿನ ಕೆಲ ಹಳಿಗಳು ಹಾನಿ ಆಗಿರುವುದನ್ನು ನೋಡಿದ್ದಾರೆ. ಈ ವೇಳೆಯೇ ದೂರದಿಂದ ಪ್ಯಾಸೆಂಜರ್ ರೈಲೊಂದು ಬರುವುದನ್ನು ಅವರು ಗಮನಿಸಿದ್ದಾರೆ.
ಇನ್ನೇನು ಹಾನಿಗೊಳಗಾದ ಹಳಿಗಳ ಮೇಲೆ ರೈಲು ಸಂಚರಿಸಿದರೆ ಅಪಘಾತವಾಗುವುದು ಖಚಿತವೆಂದುಕೊಂಡ ಬಾಲಕ ತಾನು ಹಾಕಿದ್ದ ಕೆಂಪು ಬಣ್ಣದ ಟೀ ಶರ್ಟ್ ನ್ನೇ ಧ್ವಜದ ರೀತಿ ಉಪಯೋಗಿಸಿಕೊಂಡು ವೇಗದಿಂದ ಬರುತ್ತಿದ್ದ ರೈಲನ್ನು ನಿಲ್ಲಿಸಿದ್ದಾರೆ.
ರೈಲಿನ ಚಾಲಕನಿಗೆ ಎಚ್ಚರಿಕೆ ನೀಡುವ ಸಲುವಾಗಿ ಬಾಲಕ ತನ್ನ ಟೀ ಶರ್ಟ್ ನ್ನು ಧ್ವಜದ ರೀತಿ ಬಳಸಿದ್ದನ್ನು ನೋಡಿ ಲೋಕೋಮೋಟಿವ್ ಪೈಲಟ್ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾರೆ. ಇದರಿಂದ ಸಂಭವಿಸಲಿದ್ದ ದೊಡ್ಡ ಅಪಘಾತ ತಪ್ಪಿದಂತೆ ಆಗಿದೆ.
ಈ ಬಗ್ಗೆ ಮಾತನಾಡುವ ಈಶಾನ್ಯ ಗಡಿ ರೈಲ್ವೆಯ ವಕ್ತಾರ ಸಬ್ಯಸಾಚಿ ಡಿ, “ಮಾಲ್ಡಾದಲ್ಲಿ 12 ವರ್ಷದ ಬಾಲಕ ತನ್ನ ಕೆಂಪು ಶರ್ಟ್ ನ್ನು ರೈಲಿನ ಮುಂಭಾಗ ಬೀಸಿದ್ದಾನೆ. ಇದರಿಂದಾಗಿ ಲೋಕೋ-ಪೈಲಟ್ ತುರ್ತು ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ. ಭಾರೀ ಮಳೆಯಿಂದಾಗಿ ರೈಲು ಹಳಿ ಹಾಳಾಗಿದ್ದರಿಂದ ಬಾಲಕ ಹೀಗೆ ಮಾಡಿದ್ದಾನೆ” ಎಂದು ಅವರು ಹೇಳಿದ್ದಾರೆ.
ರೈಲ್ವೆ ಅಧಿಕಾರಿಗಳು ಬಾಲಕನ ಧೈರ್ಯವನ್ನು ಮೆಚ್ಚಿ ಪ್ರಮಾಣಪತ್ರವನ್ನು ನೀಡಿ ಗೌರವಿಸಿದ್ದಾರೆ. ನಗದು ಬಹುಮಾನವನ್ನು ಸಹ ನೀಡಿದ್ದಾರೆ. ಸ್ಥಳೀಯ ಸಂಸದರು ಮತ್ತು ವಿಭಾಗೀಯ ರೈಲು ವ್ಯವಸ್ಥಾಪಕರು ಬಾಲಕನ ಮನೆಗೆ ಭೇಟಿ ನೀಡಿ ಅಭಿನಂದಿಸಿದ್ದಾರೆ.
ಸದ್ಯ ಹಾನಿಗೊಳಗಾದ ಹಳಿಗಳ ಭಾಗವನ್ನು ಸರಿಪಡಿಸಿ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.