Advertisement

ಅರ್ಹರಿಗೆ ದೊರಕಲಿ ಯೋಜನೆಗಳ ಲಾಭ

04:06 PM Jun 22, 2018 | |

ವಿಜಯಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ, ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಲಾಭ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಕೇಂದ್ರ ಕುಡಿಯುವ ನೀರು-ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ ಜಿಗಜಿಣಗಿ ಸೂಚಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ
ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಕೇಂದ್ರದ ಯೋಜನೆಗಳಾದ ಮುದ್ರಾ, ಪ್ರಧಾನ ಮಂತ್ರಿ ಆವಾಸ್‌ ಯೋಜನೆ, ಅಮೃತ್‌ ಯೋಜನೆಗಳು, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಕಾರ್ಯಕ್ರಮಗಳು ಸಮರ್ಪಕವಾಗಿ ಬಳಕೆಯಾಗಬೇಕು.

ನಗರಕ್ಕೆ ಸೀಮಿತವಾಗಿರುವ ಜನೌಷಧಿಯನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸಬೇಕು. ಇದರಿಂದ ಬಡವರಿಗೆ
ಕಡಿಮೆ ದರದಲ್ಲಿ ಜೀವರಕ್ಷಕ ಔಷಧ ಲಭ್ಯವಾಗಲು ಸಹಾಯವಾಗಲಿದೆ. ಆರೋಗ್ಯ ಕರ್ನಾಟಕ ಯೋಜನೆ ಖಾಸಗಿ
ಆಸ್ಪತ್ರೆ ಹಾಗೂ ರೋಗಿಗಳು ನೋಂದಣಿ ವಿಷಯದಲ್ಲಿ ಸಾರ್ವಜನಿಕರಲ್ಲಿ ಜಾಗೃತಿಯ ಕೊರತೆಯಿದೆ. ಹೀಗಾಗಿ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಪ್ರಚಾರ ನಡೆಸುವಂತೆ ಸೂಚಿಸಿದರು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಗತ್ಯ ಕಟ್ಟಡಗಳ ನಿರ್ಮಾಣ, ರಸ್ತೆ ಸುಧಾರಣೆಗೆ ಕ್ರಮ
ಕೈಗೊಳ್ಳಬೇಕು. ಕೂಲಿ ಕಾರ್ಮಿಕರಿಗೆ, ಅಂಗವಾಡಿ ಕಾರ್ಯಕರ್ತೆಯರಿಗೆ ವೇತನ ಪಾವತಿಸುವಲ್ಲಿ ಲೋಪ- ವಿಳಂಬವಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸ್ವತ್ಛ-ಸುಂದರ ವಿಜಯಪುರ ನಿರ್ಮಾಣದ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಿ, ಸ್ವಚ್ಚ ಭಾರತ್‌ ಮಿಷನ್‌ ಯೋಜನೆ ಅನುಷ್ಠಾನಕ್ಕಾಗಿ ನೀರಿನ ಲಭ್ಯತೆ ಇರುವ ಕಡೆ ಸಮುದಾಯ ಹಾಗೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಜನದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿ, ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಚತೆ
ಕಾಯ್ದುಕೊಳ್ಳಬೇಕು. ಇದರೊಂದಿಗೆ ಸ್ವಚ್ಚ ಭಾರತ ಪರಿಕಲ್ಪನೆ ಸಾಕಾರಕ್ಕೆ ಶ್ರಮಿಸುವಂತೆ ಸೂಚನೆ ನೀಡಿದರು.

Advertisement

ಬೇಟಿ ಬಚಾವೋ-ಬೇಟಿ ಫಡಾವೋ ಯೋಜನೆ ಪರಿಣಾಮಕಾರಿ ಜಾರಿಗೆ ಹೆಣ್ಣು ಮಗುವಿನ ರಕ್ಷಣೆ ಮತ್ತು ಶಿಕ್ಷಣ, ಲಿಂಗಾನುಪಾತದ ಕುರಿತು ಜನರಲ್ಲಿ ಕಾನೂನಿನ ಅರಿವು ಮೂಡಿಸಬೇಕು. ಗ್ರಾಮೀಣ ಭಾಗದ ಯುವ ನಿರುದ್ಯೋಗಿಗಳಿಗೆ ಸ್ವಾವಲಂಬಿ ಜೀವನಕ್ಕಾಗಿ ತರಬೇತಿ ನೀಡಲು ದೀನದಯಾಳ ಉಪಾಧ್ಯಾಯ-ಗ್ರಾಮೀಣ
ಕೌಶಲ್ಯ ಯೋಜನೆ ಅನುಷ್ಠಾನದಲ್ಲೂ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ನೈಸರ್ಗಿಕ ವಿಕೋಪದ ಸಂತ್ರಸ್ತರಿಗೆ ವಿಳಂಬ ಇಲ್ಲದೆ ಶೀಘ್ರ ಪರಿಹಾರ ವಿತರಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ ಸಚಿವ ಜಿಗಜಿಣಗಿ, ನಗರ ಸುಂದರೀಕರಣದಲ್ಲಿ ರಸ್ತೆಗಳ ಸುಧಾರಣೆ, ಉದ್ಯಾನವನಗಳ ನಿರ್ಮಾಣ ಮತ್ತು ನಿರ್ವಹಣೆ, ಸ್ವಚ್ಚತೆ ಕುರಿತು ನಿಗಾ ವಹಿಸುವುದು ಮುಖ್ಯವಾಗಿರುವುದರಿಂದ ರಸ್ತೆಗಳ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಮಹಿಳೆ ಮತ್ತು ಮಕ್ಕಳು ನಿರಾತಂಕವಾಗಿ ವಿಶ್ರಮಿಸಲು ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯ ಎಲ್ಲ ಯೋಜನೆಗಳ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿ,
ನೀರು ಪೂರೈಕೆ ಹಂತದ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ವಿಜಯಪುರ ನಗರದ 24×7 ನೀರಿನ ಸಂಪರ್ಕದ ಯೋಜನೆ ಪ್ರಗತಿಯಲ್ಲಿದ್ದು, ಬಾಕಿ  ಕಾರ್ಯಕ್ರಮಗಳನ್ನು ತ್ವರಿತವಾಗಿ ಮುಗಿಸಲು ಕ್ರಮ ಕೈಗೊಳ್ಳಬೇಕು.

ಸ್ಥಗಿತಗೊಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳು, ತಾಂತ್ರಿಕ ತೊಂದರೆ ಇರುವ ಕೇಂದ್ರಗಳನ್ನು ತ್ವರಿತವಾಗಿ ದುರಸ್ತಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದರು. ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ವಿವಿಧ ಸಬ್ಸಿಡಿ, ಬೀಜ, ರಸಗೊಬ್ಬರವನ್ನು ಅರ್ಹರಿಗೆ ವಿತರಿಸಬೇಕು. ಕಳೆದ ವರ್ಷದ ತೊಗರಿ ಖರೀದಿ ಬಾಕಿ
ಇರುವ ಹಣ ರೈತರಿಗೆ ಪಾವತಿಸಲು ಕ್ರಮ ಕೈಗೊಳ್ಳಬೇಕು. ಬೆಂಬಲ ಬೆಲೆಯಲ್ಲಿ ಬೆಳೆಗಳ ಖರೀದಿಗೆ ಆದ್ಯತೆ ನೀಡುವ ಜೊತೆಗೆ ರೈತರು ಬೆಳೆ ವಿಮಾ ಯೋಜನೆ ನೋಂದಣಿ ಮಾಡಿಲು ಕ್ರಮ ಕೈಗೊಳ್ಳಲು ಸೂಚಿಸಿದರು.

ಸಭೆಯಲ್ಲಿದ್ದ ರಾಜ್ಯ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಮಾತನಾಡಿ, ಸರ್ಕಾರ ಬಡವರು ಹಾಗೂ ದುರ್ಬಲರ ಅನುಕೂಲಕ್ಕೆ ರೂಪಿಸಿರುವ ಸಬಲೀಕರಣ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳನ್ನು ತಲುಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next