ಹುಳಿಯಾರು: ಹುಳಿಯಾರಿನ ಹೊಯ್ಸಳ ಇಂಡೇನ್ ಗ್ರಾಮೀಣ ವಿತರಕ ಗ್ಯಾಸ್ ಏಜೆನ್ಸಿ ಯಿಂದ ಹೋಬಳಿಯ ನಂದಿಹಳ್ಳಿ ಗ್ರಾಮದಲ್ಲಿ ಅಡುಗೆ ಅನಿಲ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಅರಿವು ಕಾರ್ಯಕ್ರಮ ನಡೆಸಲಾಯಿತು.
ಆರೋಗ್ಯ ಸುಧಾರಣೆ: ಗ್ರಾಪಂ ಅಧ್ಯಕ್ಷ ಎನ್.ಬಿ. ದೇವರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿ, ಕೇಂದ್ರ ಸರ್ಕಾರದ ಉಜ್ವಲ ಯೋಜನೆ ಕುಟುಂಬದ ವೆಚ್ಚ ಕಡಿಮೆ ಮಾಡುವುದಷ್ಟೇ ಅಲ್ಲದೇ ಮಹಿಳೆಯರ ಆರೋಗ್ಯ ಸುಧಾರಣೆಯಲ್ಲಿ ಹೆಚ್ಚಿನ ಪಾತ್ರ ವಹಿಸಿದೆ. ಹಿಂದೆ ಅಡುಗೆ ಮಾಡ ಬೇಕಾದರೆ ಬಳಸುವ ಸೌದೆಯಿಂದ ವಿಪರೀತ ಹೊಗೆ ಬರುತ್ತಿದ್ದ ಕಾರಣ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿತ್ತು. ಇದೀಗ ಅಡುಗೆ ಅನಿಲ ಉಪಯೋಗಿಸುವುದರಿಂದ ಸಮಯ ಉಳಿತಾಯವಾಗುವ ಜೊತೆಗೆ ಸೌದೆ ಕಡಿದು ಅರಣ್ಯ ನಾಶದಿಂದ ಉಂಟಾಗುತ್ತಿದ್ದ ಪರಿಸರ ಹಾನಿ ತಪ್ಪಿದೆ ಎಂದರು.
ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಕುಟುಂಬಗಳಿಗೂ ಅಡುಗೆ ಅನಿಲ ಸಿಗಬೇಕು ಹಾಗೂ ಸೌದೆ ಒಲೆ ಬಳಕೆಯಿಂದ ಬರುವ ಹೊಗೆ ಯಿಂದ ಕುಟುಂಬದ ಆರೋಗ್ಯ ರಕ್ಷಿಸುವ ಸಲುವಾಗಿ ಸರ್ಕಾರ ಜಾರಿಗೆ ತಂದಿರುವ ಉಜ್ವಲ ಯೋಜನೆಯನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳ ಬೇಕಿದೆ. ಆದರೆ ನಂದಿಹಳ್ಳಿ ಗ್ರಾಮದಲ್ಲಿ ಇನ್ನೂ ಗ್ಯಾಸ್ ಸಂಪರ್ಕ ಪಡೆಯದವರು ಹೆಚ್ಚಿದ್ದು, ತಕ್ಷಣ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಸಹಿತ ಗ್ಯಾಸ್ ಏಜೆನ್ಸಿ ಅವರನ್ನು ಭೇಟಿಯಾಗುವಂತೆ ತಿಳಿಸಿದರು.
ಅಡುಗೆ ಅನಿಲ ಬಳಸುವಾಗ ಎಚ್ಚರ: ಏಜೆನ್ಸಿಯ ಪ್ರಶಾಂತ್ ಮಾತನಾಡಿ, ಮಹಿಳೆಯರು ಅಡುಗೆ ಅನಿಲ ಬಳಸುವಾಗ ಎಚ್ಚರಿಕೆಯಿಂದರಬೇಕು. ಅಡುಗೆ ಅನಿಲ ಬಳಸುವಾಗ ಸೋರುವಿಕೆ ವಾಸನೆ ಬಂದರೆ ತಕ್ಷಣ ಗ್ಯಾಸ್ ವಿತರಕರಿಗೆ ಮಾಹಿತಿ ನೀಡಿದಲ್ಲಿ ಅವರು ಬಂದು ಸೋರುವಿಕೆ ತಡೆಗಟ್ಟುವ ಕೆಲಸ ಮಾಡುತ್ತಾರೆ. ಮನೆಗಳಲ್ಲಿ ಅಡುಗೆ ಅನಿಲ ಆನ್ ಮಾಡಿಟ್ಟು ಟಿ.ವಿ., ಧಾರಾವಾಹಿ ನೋಡಲು ಹೋಗದೆ ಜಾಗೃತೆ ವಹಿಸಿರಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ವಿಜಯ ಕುಮಾರಿ, ಎಸ್‌ಡಿಎಂಸಿಯ ಬಸವರಾಜು, ಹಿರಿಯ ನಾಗರೀಕ ಬಸವರಾಜು, ಹೊಯ್ಸಳ ಇಂಡೇನ್ ಏಜೆನ್ಸಿಯ ನಟರಾಜು, ಕರಿನಿಂಗಯ್ಯ, ಗೌಡರು ಮತ್ತಿತರರು ಹಾಜರಿದ್ದರು.