Advertisement

ಬೇಂದ್ರೆ ಸಾರಿಗೆ ರಹದಾರಿ ನವೀಕರಣ ತೀರ್ಪು ಇಂದು

09:19 AM Sep 25, 2019 | Suhan S |

ಧಾರವಾಡ: ಡಿಸಿ ಕಚೇರಿ ಸಭಾಂಗಣದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್‌ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಮಂಗಳವಾರ ಜರುಗಿತು.

Advertisement

ಮೋಟಾರು ವಾಹನ ನಿಯಮಾವಳಿ 1989 ನಿಯಮ (55) ರ ಪ್ರಕಾರ ಮಜಲು, ಸರಕು ಸಾಗಣೆ, ಮೋಟಾರ್‌ಕ್ಯಾಬ್‌, ಶಾಲಾವಾಹನ, ಆಟೋರಿಕ್ಷಾಗಳಿಗೆ ರಹದಾರಿಗಳನ್ನು ಸಭೆಯಲ್ಲಿ ನವೀಕರಿಸಲಾಯಿತು. ಈ ವೇಳೆ ಖಾಸಗಿ ಮಜಲು ವಾಹನಗಳ ರಹದಾರಿಗಾಗಿ ಧಾರವಾಡ ನಗರದ ವಿವಿಧ ಎಂಟು ಮಾರ್ಗಗಳಲ್ಲಿ ನವೀಕರಣ ಕೋರಿ ಬೇಂದ್ರೆ ಸಾರಿಗೆ ಸಂಸ್ಥೆ ಸಲ್ಲಿಸಿರುವ ಅರ್ಜಿ ಕುರಿತು ವಿಚಾರಣೆ ಕೈಗೊಳ್ಳಲಾಯಿತು.

ನವನಗರದಿಂದ ಧಾರವಾಡ ಕವಿವಿ, ಧಾರವಾಡ ಸಿಬಿಟಿಯಿಂದ ಕಲ್ಯಾಣ ನಗರ, ಕೋಟೂರು, ಶಿವಳ್ಳಿ, ಸಾಧನಕೇರಿ, ಮಂಡಿಹಾಳ, ತೇಜಸ್ವಿನಗರ ಮಾರ್ಗಗಳಲ್ಲಿ ಎಂಟು ರಹದಾರಿಗಳನ್ನು ನವೀಕರಿಸಬೇಕು ಎಂದು ಬೇಂದ್ರೆ ಸಂಸ್ಥೆಯ ಪರ ವಕೀಲ ನಾಗೇಶ್‌ ಎಂ.ಇ. ಮನವಿ ಮಾಡಿದರು.

ಆಗ ಪ್ರತಿವಾದ ಮಂಡಿಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಸಂಸ್ಥೆಯ ಕಾನೂನು ಅ ಧಿಕಾರಿ ನಾರಾಯಣಪ್ಪ, ಧಾರವಾಡ ಶಹರದ ಒಳಮಾರ್ಗಗಳಲ್ಲಿ ರಹದಾರಿ ಹೊಂದಿರುವ ಬೇಂದ್ರೆ ಸಾರಿಗೆ ಸಂಸ್ಥೆಯು ಆ ಮಾರ್ಗಗಳಲ್ಲಿ ನಿಯಮಿತವಾಗಿ ವಾಹನಗಳನ್ನು ಓಡಿಸುತ್ತಿಲ್ಲ. ಸಾರ್ವಜನಿಕರಿಗೆ ಸೇವೆ ನೀಡುತ್ತಿಲ್ಲ. ಈ ಕುರಿತು ದೂರು ಇರುವುದರಿಂದ ನವೀಕರಣ ಮಾಡಬಾರದು ಎಂದು ವಿನಂತಿಸಿದರು.

ಉಭಯ ಪಕ್ಷಗಾರರ ವಾದ ಆಲಿಸಿದ ಡಿಸಿ ದೀಪಾ ಚೋಳನ್‌ ಅವರು, ಈ ಕುರಿತ ಆದೇಶವನ್ನು ಸೆ. 25ರಂದು ಪ್ರಕಟಿಸುವುದಾಗಿ ತಿಳಿಸಿದರು. ಇದಲ್ಲದೇ ಬೇಂದ್ರೆ ಸಂಸ್ಥೆಯ ವಾಹನಗಳು ಬಿಆರ್‌ಟಿಎಸ್‌ ನಿಲ್ದಾಣಗಳಿಂದ ಒಳಮಾರ್ಗಗಳಿಗೆ ಸಂಪರ್ಕ ಸೇವೆಒದಗಿಸಲು ಮುಂದೆ ಬರಬೇಕು ಎಂದರು.

Advertisement

ಬಸ್‌ನಲ್ಲಿ ಗಾಲಿ ಖುರ್ಚಿ: ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ವಿಕಲಚೇತನರಿಗೆ ಸಾರ್ವಜನಿಕ ಮತ್ತು ಖಾಸಗಿ ಸಾರಿಗೆ ವಾಹನಗಳಲ್ಲಿ ಅನುಕೂಲ ಕಲ್ಪಿಸಲು ಗಾಲಿ ಖುರ್ಚಿ ಅಳವಡಿಸಬೇಕು. ಬಸ್‌ನಿಲ್ದಾಣಗಳಲ್ಲಿ ಕೂಡಾ ಈ ಸೌಲಭ್ಯಗಳು ಒದಗಿಸಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಹಾಗೂ ಬೇಂದ್ರೆ ಸಾರಿಗೆ ಸಂಸ್ಥೆಗಳ ಮಾಲೀಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ರವೀಂದ್ರ ಕವಲಿ, ಅಪ್ಪಯ್ಯ ನಾಲತ್ವಾಡಮಠ, ಡಿವೈಎಸ್‌ಪಿ ಗುರು ಮತ್ತೂರ, ವಾಕರಸಾಸಂ ಅಧಿಕಾರಿಗಳಾದ ವಿವೇಕಾನಂದ ವಿಶ್ವಜ್ಞ, ಅಶೋಕ ಪಾಟೀಲ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next