Advertisement

ಬೆನ್‌ ಸ್ಟೋಕ್ಸ್‌ ಎಲ್ಲರಿಗೂ ಬೇಕು: ಮಾರ್ಗನ್‌

06:19 PM Jun 12, 2017 | Team Udayavani |

ಲಂಡನ್‌: ವಿಶ್ವದ ಎಲ್ಲ ತಂಡಗಳು ಬೆನ್‌ ಸ್ಟೋಕ್ಸ್‌ ತಮ್ಮ ತಂಡದಲ್ಲಿ ಇರಬೇಕೆಂದು ಬಯಸುತ್ತಾರೆ ಎಂದು ಇಂಗ್ಲೆಂಡ್‌ ತಂಡದ ನಾಯಕ ಇವೋನ್‌ ಮಾರ್ಗನ್‌ ಹೇಳಿದ್ದಾರೆ.

Advertisement

ಎಜ್‌ಬಾಸ್ಟನ್‌ನಲ್ಲಿ ಶನಿವಾರ ಆಸ್ಟ್ರೇಲಿಯ ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ ಸ್ಟೋಕ್ಸ್‌ ಅಜೇಯ 102 ರನ್‌ ಸಿಡಿಸಿದರಲ್ಲದೇ ಮಾರ್ಗನ್‌ ಜತೆ 26 ಓವರ್‌ಗಳಲ್ಲಿ 159 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಕುಸಿತ ಇಂಗ್ಲೆಂಡ್‌ ತಂಡವನ್ನು ಪಾರು ಮಾಡಿದರಲ್ಲದೇ ಡಕ್‌ವರ್ತ್‌ ಲೂಯಿಸ್‌ ನಿಯಮದಡಿ ತಂಡ 40 ರನ್ನುಗಳ ಗೆಲುವು ದಾಖಲಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

ಸ್ಟೋಕ್ಸ್‌ ಅವರ ಈ ಸಾಹಸದ ಆಟಕ್ಕೆ ನಾಯಕ ಮಾರ್ಗನ್‌ ಮುಕ್ತಕಂಠದಿಂದ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ನಲ್ಲಿ ಅಪ್ರತಿಮ ಪ್ರತಿಭೆ ಹೊಂದಿರುವ ಸ್ಟೋಕ್ಸ್‌ ಯಶಸ್ವಿ ಆಲ್‌ರೌಂಡರ್‌ ಆಗಿದ್ದಾರೆ. ಐಪಿಎಲ್‌ನಲ್ಲಿ ಆಡಿದ ಅನುಭವದಿಂದ ಅವರು ತಾಳ್ಮೆಯಿಂದ ಆಟವಾಡಿ ತಂಡ ಕಠಿನ ಗುರಿಯನ್ನು ಬೆಂಬತ್ತುವಲ್ಲಿ ನೆರವಾಗಿದ್ದಾರೆ ಎಂದು ಮಾರ್ಗನ್‌ ತಿಳಿಸಿದ್ದಾರೆ.

ಐಪಿಎಲ್‌ ಹರಾಜಿನ ಮೂಲಕ ಅವರು ಪ್ರತಿಯೊಂದು ತಂಡಕ್ಕೆ ಬೇಕು ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಬಾರಿಯ ಐಪಿಎಲ್‌ ಹರಾಜಿನಲ್ಲಿ ಸ್ಟೋಕ್ಸ್‌ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದ್ದರು. ಅವರು ತಂಡದಲ್ಲಿದ್ದರೆ ಬ್ಯಾಟಿಂಗ್‌, ಬೌಲಿಂಗ್‌ ಅಥವಾ ಫೀಲ್ಡಿಂಗ್‌ ಮೂಲಕ ತನ್ನ ಕೊಡುಗೆಯನ್ನು ಸಲ್ಲಿಸುತ್ತಾರೆ ಎಂದರಲ್ಲದೇ ಮಿಡ್‌ ಆನ್‌ನಲ್ಲಿ ಫೀಲ್ಡಿಂಗ್‌ ನಡೆಸಿದ್ದ ಸ್ಟೋಕ್ಸ್‌ ಹಲವು ರನ್‌ಗಳನ್ನು ರಕ್ಷಿಸಿದ್ದಾರೆ ಎಂದರು.

ಅವರ ಬ್ಯಾಟಿಂಗ್‌ ಅಸಾಮಾನ್ಯವಾದದ್ದು. ಕ್ರೀಸ್‌ನಲ್ಲಿ ಅವರು ತಾಳ್ಮೆ ವಹಿಸಿ ಯಾವುದೇ ಒತ್ತಡವಿಲ್ಲದೇ ಆಡಿದ್ದಾರೆ. ಅವರ ಆಟ ಅತ್ಯದ್ಭುತವಾಗಿದೆ ಎಂದು ಮಾರ್ಗನ್‌ ತಿಳಿಸಿದರು. ಮೂರು ವಿಕೆಟ್‌ ಬೇಗನೇ ಕಳೆದುಕೊಂಡು ಒದ್ದಾಡುತ್ತಿದ್ದ ಇಂಗ್ಲೆಂಡ್‌ 35 ರನ್‌ ತಲುಪಿದಾಗ ಮಳೆ ಬಂದು ಆಟ ನಿಂತಿತ್ತು. ಆಬಳಿಕ ಆಟ ಆರಂಭವಾದಾಗ ಮಾರ್ಗನ್‌ ಎದುರಿಸಿದ ಮೊದಲೆರಡು ಎಸೆತಗಳಲ್ಲಿ ಬೌಂಡರಿ ಬಾರಿಸಿದ್ದರು. ಆಬಳಿಕ ಸ್ಟೋಕ್ಸ್‌ ಕೂಡ ಸಿಡಿಯುತ್ತ ಹೋದರು.

Advertisement

ಆಸ್ಟ್ರೇಲಿಯದ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಲು ಒಳ್ಳೆಯ ಜತೆಯಾಟ ಅಗತ್ಯವಾಗಿ ಬೇಕಿತ್ತು. ಅದಕ್ಕಾಗಿ ಜವಾಬ್ದಾರಿಯಿಂದ ಆಡಿದೆವು. ಅವರು ನಿಜವಾಗಿಯೂ ಉತ್ತಮ ಬೌಲಿಂಗ್‌ ದಾಳಿ ನಡೆಸಿದರು. ಆಸ್ಟ್ರೇಲಿಯ ಅಪಾಯಕಾರಿ ತಂಡ ಎಂದು ಮಾರ್ಗನ್‌ ತಿಳಿಸಿದರು.

ಆಸ್ಟ್ರೇಲಿಯದಂತಹ ತಂಡವನ್ನು ಸೋಲಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಈ ಪಂದ್ಯದಿಂದ ನಮಗೇನೂ ಲಾಭವಿಲ್ಲದಿದ್ದರೂ ವಿಶ್ವದ ಶ್ರೇಷ್ಠ ತಂಡವನ್ನು ಸೋಲಿಸಿದ ಉತ್ಸಾಹದಲ್ಲಿ ಮುಂದಿನ ಪಂದ್ಯಗಳಲ್ಲಿ ಆತ್ಮವಿಶ್ವಾಸದಿಂದ ಆಡಬಹುದು. ಭವಿಷ್ಯದ ಕೂಟಗಳನ್ನು ಗಂಭೀರವಾಗಿ ಪರಿಗಣಿಸಿದರೆ ಇಂತಹ ಕಠಿನ ಪಂದ್ಯಗಳನ್ನು ಗೆಲ್ಲುವ ಅಗತ್ಯವಿದೆ ಎಂದು ಮಾರ್ಗನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next