ಸಿದ್ದಾಪುರ : ಬೆಳ್ವೆ ತಾರಿಕಟ್ಟೆ ಕ್ರಾಸ್ ಸಮೀಪದ ರಾ.ಹೆ.ಗೆ ತಾಗಿಕೊಂಡಿರುವ ಶ್ರೀ ಗಣೇಶ್ ಫ್ಯೂಯಲ್ಸ್ ಸರ್ವೀಸ್ ಪೆಟ್ರೋಲ್ ಬಂಕ್‌ನ ಕಚೇರಿಗೆ ನುಗ್ಗಿದ ಕಳ್ಳ 1,89,000 ರೂ. ನಗದು ದೋಚಿಕೊಂಡು ಪರಾರಿಯಾದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಶ್ರೀ ಗಣೇಶ್ ಫ್ಯೂಯಲ್ಸ್ ಸರ್ವೀಸ್ ಪೆಟ್ರೋಲ್ ಬಂಕ್ ಶೇಡಿಮನೆ ಪ್ರಭಾವತಿ ಪಿ.ಶೆಟ್ಟಿ ಮಾಲಕತ್ವದಾಗಿದ್ದು, ಇದನ್ನು ಪ್ರಕಾಶ ಶೆಟ್ಟಿ ಎನ್ನುವವರು ನಡೆಸುತ್ತಿದ್ದರು. ಬೆಳಗ್ಗಿನ ಪಾಳಿಯಲ್ಲಿ ಕೆಲಸ ಮಾಡುವ ಪ್ರಭಾಕರ ಶೆಟ್ಟಿ ಅವರು ಮಂಗಳವಾರ ಬೆಳಗ್ಗೆ 6.30ರ ಸುಮಾರಿಗೆ ಬಂಕ್‌ಗೆ ಬಂದು ಕಚೇರಿ ಬಳಿ ಹೋದಾಗ ಕಚೇರಿಯ ಬಾಗಿಲು ತೆರದು ಕೊಂಡಿರುವುದನ್ನು ಗಮನಿಸಿದ್ದಾರೆ. ಕಳ್ಳ ಬಂಕ್ ಹಿಂಭಾಗದ ಮೂಲಕ ಬಂದು ಬಾಗಿಲು ಒಡೆದು ಒಳಪ್ರವೇಶಿಸಿದ್ದಾನೆ. ಒಟ್ಟು ಅಂದಾಜು 1,89,000 ರೂ. ನಗದು ಹಾಗೂ ಚಿಕ್ಕ 10 ಆಯಿಲ್ ಪ್ಯಾಕೆಟ್‌ಗಳನ್ನು ದೋಚಿಕೊಂಡು ಪರಾರಿಯಾಗಿದ್ದಾನೆ. ಅಕೌಂಟೆಂಟ್ ಪೂರ್ಣಿಮಾ ಅವರು ಘಟನೆಯ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಕುಂದಾಪುರ ವೃತ್ತ ನೀರಿಕ್ಷಕ ಗೋಪಿಕೃಷ್ಣ ಕೆ. ಆರ್., ಶಂಕರನಾರಾಯಣ ಪೊಲೀಸ್ ಠಾಣೆ ಉಪನಿರೀಕ್ಷಕ ಶ್ರೀಧರ ನಾಯ್ಕ ಮತ್ತು ಸಿಬಂದಿ ಭೇಟಿ ನೀಡಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳವರು ಬಂದು ಶೋಧ ಕಾರ್ಯ ನಡೆಸಿದ್ದಾರೆ.