Advertisement

ಬೆಳ್ತಂಗಡಿ: ಎರಡು ಕಡೆ ಕೋತಿ ಶವ ಪತ್ತೆ  

04:11 AM Jan 12, 2019 | Team Udayavani |

ಬೆಳ್ತಂಗಡಿ: ಉಜಿರೆಯಲ್ಲಿ ಶುಕ್ರವಾರ ಕೋತಿಯ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಲ್ಲಿನ ತಾಲೂಕು ಪಶು ವೈದ್ಯಾಧಿಕಾರಿಗಳಲ್ಲಿ ವಿಚಾರಿಸಿದಾಗ ಜ.10ರಂದು ಕೂಡ ಸವಣಾಲು ಸಮೀಪದ ಕನ್ನಾಜೆಬೈಲಿನಲ್ಲಿ ಇನ್ನೊಂದು ಕೊಳೆತ ಶವ ಪತ್ತೆಯಾಗಿರುವುದನ್ನು ತಿಳಿಸಿದ್ದಾರೆ.

Advertisement

ಎರಡೂ ಕಡೆ ಶವಗಳು ಕೊಳೆತಿದ್ದುದರಿಂದ ಪರೀಕ್ಷೆ ನಡೆಸದೆ ಸುಟ್ಟು ಹಾಕಿದ್ದಾರೆ. ಜತೆಗೆ ಈ ಕುರಿತು ಆರೋಗ್ಯ ಹಾಗೂ ಪಶು ಸಂಗೋಪನ ಇಲಾಖೆಯಲ್ಲಿ ವಿಚಾರಿಸಿದಾಗ, ಸಾಮಾನ್ಯ ಸಾವು ಎಂಬ ಉತ್ತರ ಲಭಿಸಿದೆ. ಉಜಿರೆಯಲ್ಲಿ ಕೋತಿ ಸತ್ತ ಪ್ರದೇಶಕ್ಕೆ ವೈದ್ಯಾಧಿಕಾರಿ ಡಾ| ಅರ್ಚನಾ, ಹೆಲ್ತ್‌ ಇನ್ಸ್‌ಪೆಕ್ಟರ್‌ ಸ್ವತಂತ್ರ ರಾವ್‌, ಮಂಗನ ಕಾಯಿಲೆ ವಿಶೇಷಾಧಿಕಾರಿ ಅಶೋಕ್‌, ಗ್ರಾ.ಪಂ. ಅಧ್ಯಕ್ಷ ಶ್ರೀಧರ ಪೂಜಾರಿ, ಸಿಬಂದಿ ರಮೇಶ್‌, ಉಜಿರೆ ಪಶು ವೈದ್ಯಾಧಿಕಾರಿ ಡಾ| ಕಾರ್ತಿಕ್‌, ಅರಣ್ಯಾ ಧಿಕಾರಿಗಳು ಭೇಟಿ ನೀಡಿದ್ದಾರೆ.

ಕನ್ನಾಜೆಬೈಲು: ಮಾಹಿತಿಯೇ ಇಲ್ಲ
ಜ. 10ರಂದು ಕನ್ನಾಜೆಬೈಲಿನಲ್ಲೂ ಶವ ಪತ್ತೆ ಕುರಿತು ಪಶು ಸಂಗೋಪನ ಇಲಾಖೆಯವರು ತಿಳಿಸಿದ್ದಾರೆ. ಆದರೆ ಹಲವು ದಿನಗಳಿಂದ ಮಂಗನ ಕಾಯಿಲೆ ಸುದ್ದಿ ಮಾಡುತ್ತಿದ್ದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಕನ್ನಾಜೆಬೈಲಿಗೆ ತಾಲೂಕು ಪಶು ವೈದ್ಯಾಧಿಕಾರಿ ಡಾ| ರತ್ನಾಕರ ಮಲ್ಯ, ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಶವ ವನ್ನು ಪರಿಶೀಲಿಸಿ, ಸುಟ್ಟು ಹಾಕಿದ್ದಾರೆ.

1 ಕಿ.ಮೀ.ಯಲ್ಲಿ ಸರ್ವೆ
ಆರೋಗ್ಯ ಇಲಾಖೆ ಉಜಿರೆಯಲ್ಲಿ ಶವ ಪತ್ತೆಯಾಗಿರುವ 1 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲ ಮನೆಗಳ ಸರ್ವೇಗೆ ಸಿದ್ಧತೆ ನಡೆಸಿದೆ. ಜ್ವರದ ಪ್ರಕರಣ ಕಂಡು ಬಂದರೆ ಸೂಕ್ತ ಪರೀಕ್ಷೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ತಾಲೂಕಿನ ಕರಾಳ ನೆನಪು
ಮಂಗನ ಕಾಯಿಲೆ ಎಂದರೆ ಬೆಳ್ತಂಗಡಿ ತಾಲೂಕಿನ ಜನತೆ ಬೆಚ್ಚಿಬೀಳುವ ಮಟ್ಟಿಗೆ ಇಲ್ಲಿ 1980ರ ದಶಕದಲ್ಲಿ ಅದು ಸಾವುನೋವುಗಳನ್ನು ತಂದಿದೆ. ಕೊಯ್ಯೂರು ಹಾಗೂ ಪಟ್ರಮೆ ಗ್ರಾಮಗಳಲ್ಲಿ ಹೆಚ್ಚಿನ ತೊಂದರೆ ನೀಡಿದ್ದು, ಹತ್ತಾರು ಮಂದಿಯ ಸಾವಿನ ಜತೆಗೆ, ನೂರಾರು ಮಂದಿ ಹಾಸಿಗೆ ಹಿಡಿದಿದ್ದರು. 

Advertisement

ಸರ್ವೇಗೆ ಕ್ರಮ
ಉಜಿರೆಯಲ್ಲಿ ಕೋತಿಯು ಕಾಯಿಲೆಯಿಂದ ಸತ್ತಿರುವ ಸಾಧ್ಯತೆ ಇಲ್ಲ. ಪ್ರಸ್ತುತ ಮುನ್ನೆಚ್ಚರಿಕೆಯಾಗಿ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸರ್ವೆ ನಡೆಸುವುದಕ್ಕೆ ತಿಳಿಸಲಾಗಿದೆ. ಜ್ವರದ ಪ್ರಕರಣ ಕಂಡುಬಂದರೆ ಶೀಘ್ರ ಕ್ರಮಕೈಗೊಳ್ಳಲಾಗುತ್ತದೆ.
ಸ್ವತಂತ್ರ ರಾವ್‌, ಹೆಲ್ತ್‌ ಇನ್ಸ್‌ಪೆಕ್ಟರ್‌, ಉಜಿರೆ

ಸ್ಯಾಂಪಲ್‌ ಸಂಗ್ರಹ ಸಾಧ್ಯವಾಗಿಲ್ಲ
ಕೋತಿ ಶವ ಕೊಳೆತ ಸ್ಥಿತಿಯಲ್ಲಿದ್ದು, ಸ್ಯಾಂಪಲ್‌ ಸಂಗ್ರಹ ಸಾಧ್ಯವಾಗಿಲ್ಲ. ಸ್ಥಳೀಯ ಪಶುವೈದ್ಯಾಧಿಕಾರಿಗಳು ಮಂಗಗಳು ಜಗಳವಾಡಿ ಸತ್ತಿವೆ, ಕಾಯಿಲೆಯಿಂದ ಅಲ್ಲ ಎಂಬ ಮಾಹಿತಿ ನೀಡಿದ್ದಾರೆ. ಶವ ಸುಡಲಾಗಿದ್ದು, ಆತಂಕ ಅನಗತ್ಯ.
ಡಾ| ಕಲಾಮಧು, ತಾಲೂಕು ಆರೋಗ್ಯಾಧಿಕಾರಿ, ಬೆಳ್ತಂಗಡಿ

ಸಾಮಾನ್ಯ ಸಾವು ಸಾಧ್ಯತೆ
ಸವಣಾಲು ರಸ್ತೆಯ ಕನ್ನಾಜೆಬೈಲಿನ ಕಾಡಿನಲ್ಲಿ ಜ.10ರಂದು ಕೊಳೆತ ಸ್ಥಿತಿಯಲ್ಲಿ ಕೋತಿಯ ಶವ ಪತ್ತೆಯಾಗಿದ್ದು, ಕೊಳೆತಿರುವ ಕಾರಣ ಪರೀಕ್ಷೆ ಅಸಾಧ್ಯ. ಜಗಳ ಅಥವಾ ವಿದ್ಯುತ್‌ ಲೈನಿಗೆ ತಾಗಿ ಸತ್ತಿರುವ ಸಾಧ್ಯತೆ ಹೆಚ್ಚಿದೆ.
ಡಾ| ರತ್ನಾಕರ ಮಲ್ಯ, ಸ. ನಿರ್ದೇಶಕರು,  ಪ.ಸಂ. ಇಲಾಖೆ, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next