ಬೆಳ್ತಂಗಡಿ: ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭ ತುಳು ನಾಡ ಧ್ವಜವನ್ನು ಬೆಳ್ತಂಗಡಿ ಬಸ್ ನಿಲ್ದಾಣ ಕಟ್ಟೆಯಲ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಹಾರಿಸಿದ ಘಟನೆ ನಡೆದಿದೆ.
ಪ್ರತ್ಯೇಕ ತುಳುನಾಡ ಘೋಷಣೆಗೆ ಹಲವು ವರ್ಷಗಳಿಂದ ಕೂಗು ಕೇಳಿ ಬರುತ್ತಿದ್ದ ನಡುವೆಯೇ ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ಕನ್ನಡ ಧ್ವಜಕ್ಕೆ ಅವಮಾನ ಮಾಡಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳ್ತಂಗಡಿ ಬಸ್ ನಿಲ್ದಾಣದ ಮುಂಭಾಗವಿರುವ ಕರ್ನಾಟಕ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಕನ್ನಡ ಧ್ವಜ ಕಟ್ಟೆಯಲ್ಲಿ ನವೆಂಬರ್ 1 ರಂದು ಬೆಳ್ಳಂಬೆಳಗ್ಗೆ ತುಳುನಾಡ ಧ್ವಜ ಹಾರಿಸಿ ಕನ್ನಡ ಧ್ವಜವನ್ನು ಕೆಳಭಾಗದಲ್ಲಿ ಹಾರಿಸುವ ಕೃತ್ಯವೆಸಗಲಾಗಿದೆ.
ಮಧ್ಯಾಹ್ಮ 12 ರವರೆಗೂ ಧ್ವಜ ಹಾರಾಡುತ್ತಿದ್ದು, ಯಾವೊಬ್ಬ ಇಲಾಖೆ ಅಧಿಕಾರಿಗಳ ಗಮನಕ್ಕೂ ಬಾರದಿರುವುದು ವಿಪರ್ಯಾಸ.ಮತ್ತೊಂದೆಡೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗೇಟ್ ಮುಂಭಾಗವೂ ತುಳುನಾಡ ಧ್ವಜ ಕಟ್ಟಿ ಹೋಗಿರುವುದು ಹಲವು ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ.
ಪ್ರತ್ಯೇಕ ತುಳುನಾಡು ಘೋಷಣೆಗೆ ದ.ಕ.ಜಿಲ್ಲೆಯಾದ್ಯಂತ ಪರ ವಿರೋಧದ ನಡುವೆಯೇ ನಾಡು ನುಡಿ ಒಂದೇ ಎಂಬ ಧ್ಯೇಯದೊಂದಿಗೆ ಉಸಿರಾಡುವ ಈ ನೆಲದಲ್ಲಿ ಮಾತೃಭಾಷೆಗೆ ಅವಮಾನ ವೆಸಗಿರುವುದು ಸರಿ ಅಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬಂದಿದೆ.ಹಿಂದೆಯೂ ತಾಲೂಕಿನಲ್ಲಿ ತುಳುನಾಡ ಸಂಘಟನೆ ತುಳು ಧ್ವಜ ಹಾರಿಸಿದ ಸಂದರ್ಭದಲ್ಲಿ ಪೋಲಿಸರು ಬಂಧಿಸಿ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದ ಘಟನೆಯೂ ನಡೆದಿತ್ತು.