Advertisement

Belthangady ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದೇಗುಲದ ಅರ್ಚಕ

12:44 AM May 05, 2024 | Team Udayavani |

ಬೆಳ್ತಂಗಡಿ: ಸವಣಾಲು ಗ್ರಾಮದ ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದ ಅರ್ಚಕ ಶಿರಸಿ ಮೂಲದ ವಿಜಯ್‌ ಹೆಗಡೆ (33) ಅವರು ದೇವಸ್ಥಾನದ ಹಿಂಭಾಗದಲ್ಲಿ ತಾನು ವಾಸವಿಗಿದ್ದ ಮನೆಯ ಹಿಂಬದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 4ರಂದು ನಡೆದಿದೆ.

Advertisement

ಸುಮಾರು 10 ವರ್ಷಗಳಿಂದ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು.ಎಂದಿನಂತೆ ಶನಿವಾರ ಮುಂಜಾನೆ ಭಕ್ತರು ಆಗಮಿಸುವ ವೇಳೆ ಅರ್ಚಕ ವಿಜಯ್‌ ಹೆಗಡೆ ಬಾರದೇ ಇರುವುದನ್ನು ಕಂಡು ಕ್ಷೇತ್ರದ ಸಿಬಂದಿ ಹಾಗೂ ಭಕ್ತರು ಅವರು ತಂಗುತ್ತಿದ್ದ ವಸತಿಗೃಹಕ್ಕೆ ವಿಚಾರಿಸಲು ತೆರಳಿದಾಗ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ.

ಸರಳ ಸಜ್ಜನ ಸ್ವಭಾವದವರಾಗಿದ್ದ ಅರ್ಚಕರು, ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಅವರ ಕಾಯಕದಲ್ಲಿ ನಿಷ್ಠೆಯಿಂದ ತೊಡಗಿಕೊಂಡಿದ್ದರು. ಆದರೂ ಯಾವ ಕಾರಣಕ್ಕೆ ಆತ್ಮಹತ್ಯೆಗೈದಿದ್ದಾರೆ ಎಂದು ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.

ಪತ್ನಿ ಬಾಣಂತಿಯಾಗಿರುವುದರಿಂದ ತಾಯಿ ಮನೆಯಲ್ಲಿದ್ದರು. ಪತ್ನಿ ಮನೆಯವರು ಬಂದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ಮನೆಯವರಿಗೆ ಹಸ್ತಾಂತರಿಸಲಾಗಿದೆ. ಒಂದು ವರ್ಷದ ಹಿಂದೆ ವಿವಾಹವಾಗಿದ್ದ ಅವರು ತಾಯಿ, ತಂದೆ, ಪತ್ನಿ, 2 ತಿಂಗಳ ಪುತ್ರನನ್ನು ಅಗಲಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next