Advertisement
ಪ್ರಾಥಮಿಕ ಶಾಲಾ ಜಿಲ್ಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲಾರ್ ಅವರು ಮಾತನಾಡಿ, ಹೋರಾಟದ ಮೊದಲ ಹಂತವಾಗಿ ಮಾ.31ರ ಒಳಗೆ ರಾಜ್ಯದ ಎಲ್ಲ ಶಾಸಕರಿಗೆ ಶಿಕ್ಷಕರ ಸಂಘದವರು ಮನವಿ ಅರ್ಪಿಸಿದ್ದಾರೆ. ಇದೀಗ ಎರಡನೆ ಹಂತವಾಗಿದ್ದು ಆ.5ರಂದು ಜಿಲ್ಲಾಮಟ್ಟದಲ್ಲಿ ಸಾಂಕೇತಿಕ ಧರಣಿ ನಡೆಯಲಿದೆ. ಸೆ.5ರಂದು ರಾಜ್ಯಮಟ್ಟದಲ್ಲಿ ಧರಣಿ ನಡೆಯಲಿದ್ದು ಅ.5ರಂದು ಜಂತರ್ ಮಂತರ್ ದಿಲ್ಲಿಯಲ್ಲಿ 50 ಸಾವಿರ ಶಿಕ್ಷಕರು ಸೇರಿ ಪಾರ್ಲಿಮೆಂಟ್ ಚಲೋ ನಡೆಸಲಿದ್ದಾರೆ. ಅ. 6ರಂದು ರಾಷ್ಟ್ರ ಕಾರ್ಯಕಾರಿ ಸಭೆಯನ್ನು ದಿಲ್ಲಿಯ ಶಿಕ್ಷಕ ಭವನದಲ್ಲಿ ನಡೆಸಿ ಹೋರಾಟದ ಮುಂದಿನ ಹಂತ ನಿರ್ಧಾರವಾಗಲಿದೆ ಎಂದರು.
7ನೇ ವೇತನ ಆಯೋಗದ ಶಿಫಾರಸುಗಳನ್ನು ಎಲ್ಲ ರಾಜ್ಯಗಳಲ್ಲಿ ಜಾರಿಗೊಳಿಸಬೇಕು. ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿ ಮಾಡಬೇಕು. ಪ್ರಾಥಮಿಕ ಶಿಕ್ಷಣದ ಅಭಿವೃದ್ಧಿಗಾಗಿ ಪ್ರಾಥಮಿಕ ಶಿಕ್ಷಣ ಮಂಡಳಿ ಸ್ಥಾಪಿಸಬೇಕು. ರಾಜ್ಯದ ಎಲ್ಲ ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು. ಸರಕಾರಿ ಶಾಲೆಗಳ ಸಬಲೀಕರಣಕ್ಕೆ ತರಗತಿಗೊಬ್ಬ ಶಿಕ್ಷಕ, ಶಾಲೆಗೊಬ್ಬ ಮುಖ್ಯೋಪಾಧ್ಯಾಯರನ್ನು ನೇಮಿಸಬೇಕು ಎಂದು ಒತ್ತಾಯಿಸಲಾಯಿತು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ನಾರಾವಿ, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಪ್ರಭಾಕರ ಹೆಗ್ಡೆ ಹಟ್ಟಾಜೆಗುತ್ತು, ಧರಣೇಂದ್ರ ಜೈನ್, ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ರಘುಪತಿ ಕೆ. ರಾವ್ , ಲಕ್ಷ್ಮಣ ಪೂಜಾರಿ, ಸುರೇಶ್ ಮಾಚಾರ್ ಮೊದಲಾದವರು ಉಪಸ್ಥಿತರಿದ್ದರು.