Advertisement

ಶಿಕ್ಷಕರ ಜವಾಬ್ದಾರಿ ಮಹತ್ತರ: ಡಾ|ಹೆಗ್ಗಡೆ

11:09 AM Sep 06, 2018 | |

ಬೆಳ್ತಂಗಡಿ: ದೇಶದ ಯುವಜನತೆ ಸನ್ಮಾರ್ಗದಲ್ಲಿ ನಡೆದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗಿದ್ದು, ದೇಶ ಹಾಗೂ ಯುವಜನಾಂಗವನ್ನು ಸಮರ್ಥವಾಗಿ ನಿರ್ಮಾಣ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸುಂದರ ಸಮಾಜದ ನಿರ್ಮಾಣದ ದೃಷ್ಟಿಯಿಂದ ಶಿಕ್ಷಕರು ಮಕ್ಕಳ ಪ್ರೀತಿಯನ್ನು ಗಳಿಸಿ ಅವರನ್ನು ತಿದ್ದುವ ಕಾರ್ಯ ಮಾಡಬೇಕಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಬುಧವಾರ ತಾ| ಶಿಕ್ಷಕರ ದಿನಾಚರಣೆ ಸಮಿತಿ ವತಿಯಿಂದ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಜರಗಿದ ತಾ| ಮಟ್ಟದ ಶಿಕ್ಷಕರ ದಿನವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಸಮ್ಮಾನ
ಈ ಸಂದರ್ಭ ತಾಲೂಕಿನ ಉತ್ತಮ ಶಾಲೆ, ಎಸೆಸೆಲ್ಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು, ಶಾಲೆ, ಸಾಧನೆ ಮಾಡಿದ ವಿಶೇಷ ಚೇತನ ಮಕ್ಕಳು, ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು. ರಾಮಕೃಷ್ಣ ಭಟ್‌, ಸೂರ್ಯನಾರಾಯಣ ಪುತ್ತೂರಾಯ ಅವರು ಸಮ್ಮಾನಿತರನ್ನು ಪರಿಚಯಿಸಿದರು. ಶಿಕ್ಷಕ ಶಂಕರ್‌ ಎನ್‌. ಅವರ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು.

280 ಗುಲಾಬಿ ಮಾಲೆ
ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿದ ಡಾ| ಡಿ. ವೀರೇಂದ್ರ ಹೆಗ್ಗಡೆ, ನೂತನ ಶಾಸಕ ಹರೀಶ್‌ ಪೂಂಜಾ ಅವರಿಗೆ ತಾಲೂಕಿನ 280 ಶಿಕ್ಷಣ ಸಂಸ್ಥೆಗಳ ಪರವಾಗಿ 280 ಗುಲಾಬಿ ಹೂವುಗಳಿಂದ ತಯಾರಿಸಿದ ಮಾಲೆಯನ್ನು ಅರ್ಪಿಸಿ, ಗೌರವಿಸಲಾಯಿತು. ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ, ಕೆ.ಕೆ. ಶಾಹುಲ್‌ ಹಮೀದ್‌, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿದರು. ಮಮತಾ ಎಂ. ಶೆಟ್ಟಿ, ಸೌಮ್ಯಲತಾ ಗೌಡ, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್‌, ಸದಸ್ಯ ಕೃಷ್ಣ ಆಚಾರ್‌, ಇಒ ಕುಸುಮಾಧರ್‌ ಬಿ, ಸಮನ್ವಯಾಧಿಕಾರಿ ಗಣೇಶ್‌, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಲಕ್ಷ್ಮಣ ಶೆಟ್ಟಿ ಉಪಸ್ಥಿತರಿದ್ದರು.

ಜಿ.ಪಂ. ಮಾಜಿ ಸದಸ್ಯ ಬಿ. ರಾಜಶೇಖರ ಅಜ್ರಿ ತಮ್ಮ ತಂದೆ- ತಾಯಿ, ಪತ್ನಿ ಹೆಸರಿನಲ್ಲಿ ನಿಧಿ ಸಮರ್ಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್‌. ಗುರುಪ್ರಸಾದ್‌ ಪ್ರಸ್ತಾವಿಸಿ, ತಹಶೀಲ್ದಾರ್‌ ಮದನ್‌ಮೋಹನ್‌ ಸ್ವಾಗತಿಸಿ, ದೈಹಿಕ ಪರಿವೀಕ್ಷಣಾಧಿಕಾರಿ ಯಶೋಧರ ಸುವರ್ಣ ವಂದಿಸಿದರು. ಶಿಕ್ಷಕ ಅಜಿತ್‌ ಕುಮಾರ್‌ ಕೊಕ್ರಾಡಿ ನಿರೂಪಿಸಿದರು.

ಬಿಇಒ ಕಚೇರಿ ಸ್ಥಳಾಂತರ: ಪೂಂಜ
ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್‌ ಪೂಂಜ ಮಾತನಾಡಿ, ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುನ್ನುಡಿಯಾಗಿ ಬಿಇಒ ಕಚೇರಿಯನ್ನು ಕೃಷಿ ಇಲಾಖೆಯ ಖಾಲಿ ಕಟ್ಟಡವೊಂದಕ್ಕೆ ಸ್ಥಳಾಂತರಿಸುವ ಕುರಿತು ಜಿ.ಪಂ. ಸಿಇಒ ಅವರಿಗೆ ಪತ್ರ ಬರೆಯಲಾಗಿದೆ. ಅರ್ಧಕ್ಕೆ ನಿಂತಿರುವ ಗುರುಭವನದ ಕಾಮಗಾರಿಯನ್ನೂ ಮುಂದಿನ ಶಿಕ್ಷಕರ ದಿನದೊಳಗಾಗಿ ಪೂರ್ತಿಗೊಳಿಸುವ ಪ್ರಯತ್ನ ಮಾಡುತ್ತೇನೆ. ಬಂಟ್ವಾಳದ ದಡ್ಡಲಕಾಡು ಶಾಲೆಯಂತೆಯೇ ಬೆಳ್ತಂಗಡಿ ತಾಲೂಕಿನಲ್ಲೂ ಮೂರು ಶಾಲೆಗಳನ್ನು ಮಾದರಿಯಾಗಿ ರೂಪಿಸುವ ಚಿಂತನೆ ಇದೆ ಎಂದರು.

Advertisement

ಹೆಚ್ಚಿನ ಅವಕಾಶ
ಕಲಿಯುವುದಕ್ಕೆ ಸರಕಾರಿ, ಖಾಸಗಿ ರಂಗದಲ್ಲಿ ಹೆಚ್ಚಿನ ಅವಕಾಶಗಳಿದ್ದು, ದೇಶದ ಅಭಿವೃದ್ಧಿ ದೃಷ್ಟಿಯಿಂದ ಇದು ಪೂರಕ. ಯುವಜನತೆ ಇದನ್ನು ಸದುಯೋಪಯೋಗ ಪಡಿಸಿಕೊಂಡು ಮುಂದೆ ಬರಬೇಕಿದೆ. ಸರಕಾರದ ಸೌಲಭ್ಯಗಳಿಂದ ಸರಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಲಭ್ಯವಾಗುತ್ತಿದೆ.
– ಡಾ| ಡಿ. ವೀರೇಂದ್ರ ಹೆಗ್ಗಡೆ
ಧರ್ಮಸ್ಥಳದ ಧರ್ಮಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next