ಬೆಳ್ತಂಗಡಿ: ಕೌಟುಂಬಿಕ ವಿಚಾರದಲ್ಲಿ ದ್ವೇಷದಿಂದ ಸ್ವತಃ ಅಳಿಯನೇ ತನ್ನ ಮಾವನಿಗೆ ಸ್ಕೂಟರ್ ಢಿಕ್ಕಿ ಮಾಡಿ ಗಂಭೀರ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗೆ ದಾಖಲಾಗಿದ್ದ ಮಾವ ಮಂಗಳವಾರ ಸಾವನ್ನಪ್ಪಿದ ಘಟನೆ ನಡೆದಿದೆ.
ಮಿತ್ತಬಾಗಿಲು ಗ್ರಾಮದ ಕಂಬಳದಡ್ಡ ನಿವಾಸಿ ಕೆ.ಎಚ್. ಇಬ್ರಾಹಿಂ (60) ಸಾವನ್ನಪ್ಪಿದವರು. ಅವರ ಅಳಿಯ ಮುಹಮ್ಮದ್ ಶಾಫಿ ಈ ಕೃತ್ಯ ನಡೆಸಿದ್ದ. ಮೃತ ಇಬ್ರಾಹಿಂ ಅವರ ಮಗಳು ಮತ್ತು ಅಳಿಯನ ಮಧ್ಯೆ ಕೌಟುಂಬಿಕ ಸಮಸ್ಯೆ ಇದ್ದು, ಆತ ಆಕೆಗೆ ಖರ್ಚಿಗೆ ಹಣವೂ ನೀಡುತ್ತಿರಲಿಲ್ಲ. ಚಿತ್ರಹಿಂಸೆ ನೀಡುತ್ತಿದ್ದ. ಅನೇಕ ಬಾರಿ ರಾಜಿ ಪಂಚಾತಿಕೆ, ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು, ಪೊಲೀಸ್ ಠಾಣೆಯಲ್ಲಿ ಮಾತುಕತೆ ಎಲ್ಲವೂ ನಡೆದಿತ್ತಾದರೂ ಪ್ರಯೋಜನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ.
ಪತಿ ನೀಡುತ್ತಿದ್ದ ಹಿಂಸೆ ತಾಳಿಕೊಳ್ಳಲಾಗದೆ ಪತ್ನಿ ತವರು ಮನೆಗೆ ಬಂದಿದ್ದರು. ಮಗಳ ಸ್ಥಿತಿ ಕಂಡಿದ್ದ ತಂದೆ ಅಳಿಯನಿಂದ ಮಗಳಿಗೆ ಆಗುತ್ತಿರುವ ಹಿಂಸೆ ತಪ್ಪಿಸಲು ಮಗಳನ್ನು ಗಂಡನ ಮನೆಗೆ ಕಳಿಸಿರಲಿಲ್ಲ. ಬದಲಾಗಿ ಇನ್ನೊಬ್ಬಳು ಮಗಳ ಮನೆಗೆ ತಾತ್ಕಾಲಿಕ ನೆಲೆಯಲ್ಲಿ ಕಳಿಸಿಕೊಟ್ಟಿದ್ಧರು. ಇದೇ ವಿಚಾರವಾಗಿ ಅಳಿಯ ಮಾವನಬಳಿ ಮುನಿಸಿಕೊಂಡಿದ್ದ. ಇದೇ ದ್ವೇಷದಿಂದ ಅಳಿಯ ಶಾಫಿ ಮಾವ ಇಬ್ರಾಹಿಂ ಅವರನ್ನು ಕೊಲೆಗೈಯ್ಯುವ ಉದ್ದೇಶದಿಂದ ನ.2ರಂದು ದ್ವಿಚಕ್ರ ವಾಹನದಲ್ಲಿ ಢಿಕ್ಕಿ ಹೊಡೆದು ಮಾರಣಾಂತಿಕವಾಗಿ ಗಾಯಗೊಳಿಸಿದ್ದ. ಘಟನೆಯಿಂದ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಇಬ್ರಾಹಿಂ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಪರಾಧ ಘಟನೆಯ ಬಗ್ಗೆ ಇಬ್ರಾಹಿಂ ಪುತ್ರ ಮುಹಮ್ಮದ್ ರಫೀಕ್ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಮುಹಮ್ಮದ್ ಶಾಫಿಗೆ ಈ ಮೊದಲು ಮದುವೆಯಾಗಿದ್ದು ಮಕ್ಕಳಿದ್ದರು. ಮೊದಲ ಪತ್ನಿಗೂ ಹಿಂಸೆ ನೀಡುತ್ತಿದ್ದರಿಂದ ಆತನನ್ನು ಹೊರಹಾಕಿದ್ದರು, ಆಬಳಿಕ ಆತ ಇಬ್ರಾಹಿಂ ಅವರ ಪುತ್ರಿಯನ್ನು ವಿವಾಹವಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಘಟನೆಯಲ್ಲಿ ಬಂಧಿತನಾಗಿರುವ ಆರೋಪಿ ಶಾಫಿ ಪೊಲೀಸರ ಮುಂದೆಯೇ ಪತ್ನಿ ಮತ್ತು ದೂರುದಾರ ಭಾವ ರಫೀಕ್‌ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಪುತ್ರನನ್ನು ಅಗಲಿದ್ದಾರೆ.