ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದಲ್ಲಿ ಕಾಡಾನೆ ಮತ್ತೆ ಸಂಚಾರ ನಡೆಸಿದ್ದು, ಆಲಂದಡ್ಕ ಕೃಷಿಕರೊಬ್ಬರ ಮನೆಹಿಂದೆಯೇ ತೋಟದಲ್ಲಿ ಕಾಣಿಸಿಕೊಂಡಿದೆ.
ಮೂರು ದಿನಗಳಿಂದ ಆನೆ ಸುತ್ತಾಟ ನಡೆಸುತ್ತಿದ್ದು, ಶನಿವಾರ ಮತ್ತು ರವಿವಾರ ಕಡಿರುದ್ಯಾವರ ಗ್ರಾಮದ ಹೇಡ್ಯ ಪರಿಸರ, ಬೊಳ್ಳೂರು ಬೈಲು, ಕಾನರ್ಪ, ಬಸವದೊಡ್ಡು ಸುತ್ತಮುತ್ತ ಕೃಷಿಯನ್ನು ಹಾನಿಗೆಡಹಿದೆ.
ರವಿವಾರ ಚಂದನ್ ಹೆಬ್ಬಾರ್, ಸೂರಜ್ ಅಡೂರು, ಸಿದ್ದಪ್ಪ ಅವರ ತೋಟಕ್ಕೆ ನುಗ್ಗಿದ ಆನೆಗಳು, ಸೋಮವಾರ ಮತ್ತೆ ಹೇಡ್ಯ ಪರಿಸರದಲ್ಲಿ ಸಂಚರಿಸಿದೆ.
ಆಲಂದಡ್ಕ ವಿಘ್ನೇಶ್ ಪ್ರಭು ಇವರ ತೋಟಕ್ಕೆ ರವಿವಾರ ಮುಂಜಾನೆ 6 ಗಂಟೆಗೆ ಬಂದು ಪೈರು ಸಹಿತ ನೀರಿನ ಪೈಪ್ ಪುಡಿಗೈದಿದ್ದು, ಹಲಸಿನ ಹಣ್ಣನ್ನು ಕಿತ್ತು ಹಾಕಿವೆ. ಬಳಿಕ ಕಡಿರುದ್ಯಾವರ ಸರಕಾರಿ ಶಾಲೆಯಿಂದ 100 ಮೀಟರ್ ಅಂತರದಲ್ಲಿ ಸಾಗಿರುವ ಆನೆಗಳು ಕೆಲವು ತೋಟಗಳ ಮೂಲಕ ಕಾಡಿಗೆ ಸಾಗಿವೆ ಎಂದು ಕೃಷಿಕರು ತಿಳಿಸಿದ್ದಾರೆ.
ಮದೆನಾಡು: ಕಾಡಾನೆ ಹಾವಳಿ
ಮಡಿಕೇರಿ: ಮದೆನಾಡು ಗ್ರಾಮದಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ಕಾಡಾನೆಗಳಿಂದಾಗಿ ಗ್ರಾಮಸ್ಥರು ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಮದೆನಾಡು ಗ್ರಾಮದ ಸಾಲಾಪು ಸಮೀಪದ ಪಟ್ಟಡ ಕುಟುಂಬಸ್ಥರ ಕಾಫಿ ತೋಟಗಳಿಗೆ ಕಾಡಾನೆಗಳ ಹಿಂಡು ದಾಳಿ ನಡೆಸಿ ವ್ಯಾಪಕ ಹಾನಿ ಉಂಟಾಗಿದೆ. ಬಾಳೆ, ಅಡಿಕೆ, ತೆಂಗು, ಕಾಫಿ ಗಿಡಗಳನ್ನು ದ್ವಂಸ ಮಾಡಿದೆ. ಪುರುಷೋತ್ತಮ, ಲಲಿತ, ಧನಂಜಯ ಅವರ ತೋಟಗಳಲ್ಲೂ ಹಾನಿ ಮಾಡಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ರವಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.