ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಜೋಡು ನೆರಳು ಬಸವದಡ್ಡು ಪ್ರದೇಶಗಳಲ್ಲಿ ಮಂಗಳವಾರ ತಡರಾತ್ರಿ ಕಾಡಾನೆ ಕೃಷಿ ತೋಟಗಳಿಗೆ ದಾಳಿ ನಡೆಸಿ ಅಡಿಕೆ ಹಾಗೂ ಬಾಳೆ ಕೃಷಿಯನ್ನು ಧ್ವಂಸ ಮಾಡಿದೆ.
ಶಂಕರ ಭಟ್, ಮಚ್ಚೇಂದ್ರ ನಾಯಕ್, ವಿಶ್ವನಾಥ ಪ್ರಭು, ಮಹೇಶ ಭಟ್, ನೀಲಯ್ಯ ಗೌಡ ರಾಮಚಂದ್ರ ಗೌಡ, ಪ್ರವೀಣ ಮುಂತಾದವರ ಕೃಷಿ ತೋಟಗಳಿಗೆ ಹಾನಿ ಮಾಡಿದೆ.
ಶಂಕರ ಭಟ್ ಅವರು ತೋಟದ ಬದಿಯಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಶೆಡ್ ಅನ್ನು ನೆಲಸಮಗೊಳಿಸಿದೆ. ಸ್ಥಳೀಯರೊಬ್ಬರು ತೋಟದಲ್ಲಿ ಔಷಧ ತಯಾರಿಗಾಗಿ ಇಟ್ಟಿದ್ದ 200 ಡ್ರಮ್ ಒಂದನ್ನು ಆನೆಯು ಸಮೀಪದ ತೋಡಿಗೆಸೆದಿದೆ.
ಸುಬ್ರಹ್ಮಣ್ಯ: ಮುಂದುವರಿದ ಆನೆ ಶವ ಶೋಧ
ಸುಬ್ರಹ್ಮಣ್ಯ: ಸೋಮವಾರ ರಾತ್ರಿ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ ಕೊಚ್ಚಿ ಹೋಗಿರುವ ಆನೆಯ ಮೃತದೇಹದ ಪತ್ತೆ ಕಾರ್ಯ ಬುಧವಾರವೂ ಮುಂದುವರಿದಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ.
ನದಿಯಲ್ಲಿ ನೀರಿನ ಮಟ್ಟ ಜಾಸ್ತಿಯಾಗಿರುವುದು ಹುಡುಕಾಟಕ್ಕೂ ಅಡ್ಡಿಯಾಗಿತ್ತು. ಬುಧವಾರವೂ ಹುಡುಕಾಟ ಮುಂದುವರಿದಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.