Advertisement

Belthangady: 70 ಸಾವಿರ ಮಕ್ಕಳಿಗೆ ಜಂತುಹುಳು ಔಷಧ

01:11 PM Dec 11, 2024 | Team Udayavani |

ಬೆಳ್ತಂಗಡಿ: ಮಕ್ಕಳು ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲದಂತೆ ತಡೆಯುವ ಸಲುವಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಬೆಳ್ತಂಗಡಿ ತಾಲೂಕಿನಲ್ಲಿ 1-19 ವರ್ಷದ ವರೆಗಿನ 70,878 ಮಕ್ಕಳಿಗೆ 6 ತಿಂಗಳಿಗೊಮ್ಮೆ ಅಂದರೆ ವರ್ಷಕ್ಕೆ ಎರಡು ಬಾರಿ ಜಂತುಹುಳು ನಿವಾರಣೆ ಮಾತ್ರೆಗಳನ್ನು ನೇರವಾಗಿ ಶಾಲೆಗಳಿಗೆ ಹಂಚುವ ಅಭಿಯಾನ ಆರಂಭಗೊಂಡಿದೆ.

Advertisement

ಡಿಸೆಂಬರ್‌ 9 ರಾಷ್ಟ್ರೀಯ ಜಂತುಹುಳು ನಿವಾರಣ ದಿನದ ಪ್ರಯುಕ್ತ ಈಗಾಗಲೆ ಮಾತ್ರೆಗಳನ್ನು ವಿತರಿಸಲಾಗುತ್ತಿದ್ದು, ಬೆಳ್ತಂಗಡಿ ತಾಲೂಕು ಆರೋಗ್ಯ ಇಲಾಖೆ ಈ ಹಿನ್ನೆಲೆಯಲ್ಲಿ ಸಕ್ರಿಯಾಗಿದ್ದು ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆಯನ್ನು ಎಲ್ಲ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಉಚಿತವಾಗಿ ನೀಡುತ್ತಿದೆ. ಇದರ ಜತೆಗೆ ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ಕಡ್ಡಾಯವಾಗಿ ನೀಡಲು ಮುಂದಾಗಿದೆ.

ಅಲ್ಬೆಂಡಝೋಲ್‌ ಮಾತ್ರೆಯು ಮಕ್ಕಳು ಮತ್ತು ವಯಸ್ಕರಿಗೆ ಸುರಕ್ಷಿತ ಔಷಧವಾಗಿದೆ. ಇದನ್ನು ಚ್ವಿಂಗ್‌ ಮಾಡಿ ತಿನ್ನಬೇಕಾಗಿದ್ದು, ಕೆಲವರಿಗೆ ವಾಕರಿಕೆ, ಸೌಮ್ಯ ಹೊಟ್ಟೆ ನೋವು, ವಾಂತಿಯಾಗುವಿಕೆ, ಅತಿಸಾರ ಹಾಗೂ ಬಳಲಿಕೆ ಆಗುವ ಸಾಧ್ಯತೆ ಇರುತ್ತದೆ. ಇದು ಜಂತುಹುಳು ಇರುವ ಲಕ್ಷಣವಾಗಿದ್ದು, ಇದರಿಂದ ಯಾವುದೇ ಅಪಾಯದ ಭಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಯಾಕಾಗಿ ಮಾತ್ರೆ ನೀಡುವುದು ?
ನಾವು ಸೇವಿಸುವ ಪೌಷ್ಟಿಕ ಆಹಾರಗಳನ್ನು ನಮ್ಮ ದೇಹ ಮಾತ್ರ ಹೀರಿಕೊಂಡು ಸಮರ್ಪಕವಾಗಿ ದೇಹ ತೂಕ ಹೊಂದಲು ನೆರವಾಗುತ್ತದೆ. ತಿನ್ನುವ ಆಹಾರ ಸಂಪೂರ್ಣ ಜೀರ್ಣವಾಗುತ್ತದೆ. ಮಕ್ಕಳ ವಯಸ್ಸಿಗೆ ಅನುಗುಣವಾಗಿ ದೇಹದ ಎತ್ತರ ಹೊಂದಲು ನೆರವಾಗುತ್ತದೆ. ರಕ್ತಹೀನತೆ ನಿವಾರಣೆಯಾಗಿ ನಿಶ್ಯಕ್ತಿ, ಆಯಾಸ ಅಥವಾ ನಿತ್ರಾಣ ಹೋಗಲಾಡಿಸಿ ಕ್ರಿಯಾಶೀಲವಾಗಿರಲು ನೆರವಾಗುತ್ತದೆ. ಕೈ-ಕಾಲುಗಳಿಗೆ ಸಮರ್ಪಕವಾಗಿ ರಕ್ತ ಚಲನೆಯಾಗುವುದರಿಂದ ಬರೆಯುವಾಗ, ಆಟವಾಡುವಾಗ ಕೈ-ಕಾಲುಗಳು ದೃಢವಾಗಿರುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಪದೇ ಪದೆ ಹೊಟ್ಟೆ ನೋವು, ವಾಕರಿಕೆ ಬಾರದಂತೆ ತಡೆಯುತ್ತದೆ. ತರಗತಿಗಳಲ್ಲಿ ಏಕಾಗ್ರತೆ ಸಾಧಿಸಿ ಕಲಿಕೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ನೆರವಾಗುತ್ತದೆ.

ಸದ್ಯ70,580 ಮಾತ್ರೆಗಳ ಅವಶ್ಯಕತೆಯಿದ್ದು, 17,750 ಸಂಗ್ರಹಣೆಯಿದೆ. 52,925 ಮಾತ್ರಗಳ ಅವಶ್ಯಕತೆಯನ್ನು ಜಿಲ್ಲಾ ಆರೋಗ್ಯ ಇಲಾಖೆ ಪೂರೈಸಬೇಕಿದೆ.

Advertisement

-3,562 -1 ರಿಂದ 2 ವರ್ಷದವರು
-12,606 -ಅಂಗನವಾಡಿಯವರು
-41,669 -1-10ನೇ ತರಗತಿ
-11,909 -ಪಿಯುಸಿಯವರು
-1,132 -ಐಟಿಐಯವರು

ಫ‌ಲಾನುಭವಿ ಮಕ್ಕಳ ವಿವರ
ಅಳದಂಗಡಿ-3717, ಬೆಳ್ತಂಗಡಿ-12,270, ಚಾರ್ಮಾಡಿ-2455, ಧರ್ಮಸ್ಥಳ- 2,588, ಹತ್ಯಡ್ಕ-2,148 ಇಂದಬೆಟ್ಟು-3,331, ಕಣಿಯೂರು-5,756, ಕೊಕ್ಕಡ- 2,220, ಮಚ್ಚಿನ-4,725, ಮುಂಡಾಜೆ- 3,004, ನಾರಾವಿ-3,673, ನೆರಿಯ- 1,253, ಪಡಂಗಡಿ-6,835, ಉಜಿರೆ-11,687, ವೇಣೂರು-5,216 ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಟ್ಟಂತೆ 1-19 ವರ್ಷ ಒಳಗಿನ 70,878 ಫಲಾನುಭವಿ ಮಕ್ಕಳು ಒಳಪಡಲಿದ್ದಾರೆ ಎಂದು ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಅವರು ತಿಳಿಸಿದ್ದಾರೆ.

ಅರ್ಹ ಎಲ್ಲರೂ ಕಡ್ಡಾಯವಾಗಿ ಮಾತ್ರೆ ಸೇವಿಸಬೇಕು. ಮಕ್ಕಳಲ್ಲಿ ಸಣ್ಣಪುಟ್ಟ ಅಡ್ಡಪರಿಣಾಮ ಬಿದ್ದರೆ ಭಯಪಡದೆ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಬೇಕು.
– ಡಾ| ಸಂಜಾತ್‌, ತಾಲೂಕು ಆರೋಗ್ಯಾಧಿಕಾರಿ, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next