ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ನಡ್ಯೈಲ್ ಬೈಲಿನಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಸೋಮವಾರ ತಡರಾತ್ರಿ ಗದ್ದೆ, ತೋಟ ಗಳಿಗೆ ನುಗ್ಗಿರುವ ಎರಡು ಕಾಡಾನೆಗಳು ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ ಮಾಡಿವೆ.
ಬೀರ್ನಾಲಿ ಚಂದಪ್ಪ ಗೌಡ, ಲಿಂಗಪ್ಪ ಸಾಲಿಯಾನ್ ಕೂಡ್ಯೆ, ಆನಂದ ಗೌಡ ಹೊಸಮನೆ, ನಾರಾಯಣ ಗೌಡ ಗುತ್ತು, ಪಟ್ಲ ದೇಜಪ್ಪ ಗೌಡ, ಮುಂಡಾಜೆಕೋಡಿ ಕುಂಜಿರ ಗೌಡ ಮತ್ತಿತರರ ತೋಟ, ಗದ್ದೆಗಳಿಗೆ ನುಗ್ಗಿರುವ ಆನೆಗಳು 8 ತೆಂಗಿನ ಮರಗಳು, 10 ಅಡಿಕೆ ಮರ, 10ಕ್ಕೂ ಅಧಿಕ ಬಾಳೆಗಿಡಗಳನ್ನು ನಾಶ ಮಾಡಿವೆ. ಹಲವು ಕಡೆ ಭತ್ತದ ಗದ್ದೆಗಳಲ್ಲಿ ಓಡಾಡಿ ಪೈರನ್ನು ನೆಲಸಮ ಮಾಡಿವೆ. ಕೆರೆಗೆ ಇಳಿದು ಬಳಿಕ ಮೇಲಕ್ಕೇರಲಾರದೆ ಒದ್ದಾಡಿದ್ದು ಕೆರೆಯ ಅಂಚು ಜರಿದಿದೆ.
ಉಪವಲಯ ಅರಣ್ಯಾಧಿಕಾರಿ ರವಿಚಂದ್ರ ನೇತೃತ್ವದಲ್ಲಿ ಇಲಾಖೆಯ ಅಧಿಕಾರಿಗಳು ರಾತ್ರಿ 9.30ರಿಂದ 1 ಗಂಟೆಯವರೆಗೂ ಸ್ಥಳದಲ್ಲೇ ಇದ್ದು, ಪರಿವೀಕ್ಷಣೆ ನಡೆಸಿದರು. ರಾತ್ರಿ 2 ಗಂಟೆಗೆ ಆನೆಗಳನ್ನು ಓಡಿಸಲು ಪ್ರಯತ್ನಿಸಿದರೂ ಕಾಡಿನತ್ತ ತೆರಳಿಲ್ಲ. ಮುಂಜಾನೆ 5 ಗಂಟೆಯವರೆಗೂ ತೋಟಗಳಲ್ಲೇ ಸುತ್ತಾಡುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.
ಸೆ. 10ರಂದು ಬೆಳಗ್ಗೆ ಉಪವಲಯ ಅರಣ್ಯಾಧಿಕಾರಿ ರವಿಚಂದ್ರ, ಗ್ರಾ.ಪಂ. ಅಧ್ಯಕ್ಷೆ ಅನಿತಾ, ನಿಕಟಪೂರ್ವ ಅಧ್ಯಕ್ಷ ಯಶವಂತ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯರಾದ ಲಿಂಗಪ್ಪ ಸಾಲಿಯಾನ್, ನಾರಾಯಣ ಗೌಡ ನಡ್ಯೈಲ್, ದಿನೇಶ್ ಗುತ್ತು, ಯೋಗೀಶ್ ನೆಕ್ಕಿಲಾಡಿ, ಹರೀಶ್ ಪಟ್ಲ, ಪರಮೇಶ್ವರ್, ಹರೀಶ್ ಹೊಸಮನೆ, ಚಂದ್ರಶೇಖರ ಮುಂಡಾಜೆಕೋಡಿ, ಅಣ್ಣಿಗೌಡ ಮುಂಡಾಜೆಕೋಡಿ, ನಾರಾಯಣ ಗೌಡ ಮುಂಡಾಜೆಕೋಡಿ, ವಸಂತ ಗೌಡ, ಹರೀಶ್ ಮುಂಡಾಜೆಕೋಡಿ, ಹರೀಶ್ ಹೊಸಮನೆ ಮತ್ತಿತರರಿದ್ದರು.
ಚಾರ್ಮಾಡಿಯಲ್ಲಿ ಪ್ರತ್ಯಕ್ಷ
ಹಲವು ದಿನಗಳ ಬಳಿಕ ಚಾರ್ಮಾಡಿ ಘಾಟಿಯಲ್ಲಿ ಮಂಗಳ ವಾರ ಮುಂಜಾನೆ ರಸ್ತೆ ಬದಿಯಲ್ಲೇ ಕಾಡಾನೆ ಕಾಣಿಸಿಕೊಂಡು ವಾಹನ ಸವಾರರಲ್ಲಿ ಭೀತಿ ಮೂಡಿಸಿತು.