ಬೆಳ್ತಂಗಡಿ: ಕಕ್ಕಿಂಜೆಯ ಮನೆಯ ಶೆಡ್‌ನಲ್ಲಿ ನಿಲ್ಲಿಸಿದ್ದ ಇನ್ನೋವಾ ಕಾರನ್ನು ಕಳ್ಳತನ ಮಾಡಿದ ಪ್ರಕರಣವನ್ನು ಧರ್ಮಸ್ಥಳ ಪೊಲೀಸರು ಭೇದಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಿನ್ನಿಗೋಳಿ ತಾಳಿಪ್ಪಡಿ ಗ್ರಾಮದ ಉಮಾ ಅಜಯ್ ಶೆಟ್ಟಿ (32), ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಗಾಣದಬೆಟ್ಟು ಸೂರಜ್ ಶೆಟ್ಟಿ (23), ಇಳಂತಿಲ ಗ್ರಾಮದ ಎನ್ಮಾಡಿ ನಿವಾಸಿ ಮಂಜುನಾಥ ಪೂಜಾರಿ(30), ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ಪರೆಕಲ್ ನಿವಾಸಿ ಕಿಶೋರ್ ಟಿ. (32) ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರಿಗೆ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಚಾರ್ಮಾಡಿ ಗ್ರಾಮದ ಕಕ್ಕಿಂಜೆಯಲ್ಲಿ ನ. 9ರಂದು ರಾತ್ರಿ 10 ಗಂಟೆ ಸಮಯಕ್ಕೆ ಇಸಾಕ್ ಅವರ ಅಕ್ಕನ ಮಗ ನೌಫಾಲ್ ತಮ್ಮ ಕಾರ್‌ಶೆಡ್ಡಿನಲ್ಲಿ ನಿಲ್ಲಿಸಿದ್ದ ಇನ್ನೋವಾ ಕಾರನ್ನು ಗೆಳೆಯ ಸೈಫುದ್ದಿನ್‌ನ ಸ್ನೇಹಿತರಾದ ಸೂರಜ್ ಶೆಟ್ಟಿ ಮತ್ತು ಅಜಯ್ ಶೆಟ್ಟಿ ಅವರು ಬಾಡಿಗೆಗೆ ನೀಡುವಂತೆ ಕೇಳಿದ್ದರು. ಆದರೆ ಕಾರನ್ನು ನೀಡದ ಕಾರಣ ಅವರೇ ಕಳವು ಮಾಡಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು.
ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಠಾಣಾ ಸಬ್ ಇನ್‌ಸ್ಪೆಕ್ಟರ್‌ಅನಿಲ್ ಕುಮಾರ್ ಡಿ. ಮತ್ತು ಸಬ್ ಇನ್‌ಸ್ಪೆಕ್ಟರ್ ಸಮರ್ಥ ರವೀಂದ್ರ ಗಾಣಿಗೇರ ಹಾಗೂ ಎಎಸ್‌ಐಗಳಾದ ಸಾಮ್ಯುವೆಲ್ ಮತ್ತು ಪೌಲೋಸ್ ಹಾಗೂ ಸಿಬಂದಿ ರಾಜೇಶ್ ಎನ್., ಪ್ರಶಾಂತ್, ಮಂಜುನಾಥ್, ಮಲ್ಲಿಕಾರ್ಜುನ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.